ರಾಷ್ಟ್ರೀಯ

ಪತಿ ಜೀವಂತವಾಗಿರುವಾಗಲೇ ವಿಧವಾ ಪಿಂಚಣಿ ಪಡೆಯುತ್ತಿದ್ದ 22 ಮಹಿಳೆಯರು

Pinterest LinkedIn Tumblr


ಸೀತಾಪುರ: ಉತ್ತರ ಪ್ರದೇಶ ಸರಕಾರದ ವಿಧವಾ ಪಿಂಚಣಿಯನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಇಲ್ಲೊಂದು ನಿದರ್ಶನ ಸಿಕ್ಕಿದೆ.

ವಿಪರ್ಯಾಸ ಎಂದರೆ, ಹೆಂಡತಿ ಮಾಡಿರುವ ಕಿಲಾಡಿ ಕೆಲಸವನ್ನು ಪತ್ತೆ ಹಚ್ಚಿರುವುದು ಗಂಡನೇ! ತಾನು ಜೀವಂತವಾಗಿರುವಾಗಲೇ ಸತ್ತಿದ್ದಾನೆಂದು ದಾಖಲೆ ನೀಡಿ ಪಿಂಚಣಿ ಪಡೆಯುತ್ತಿದ್ದ ಪತ್ನಿಯ ವಿರುದ್ಧ ದೂರನ್ನೂ ನೀಡಿದ್ದಾನೆ.

ಬಟ್ಸರ್‌ಗಂಜ್‌ನಲ್ಲಿ ವಾಸವಿರುವ ಸಂದೀಪ್‌ ಕುಮಾರ್‌ ಎಂಬಾತ ತನ್ನ ಪತ್ನಿಯ ಮೊಬೈಲ್‌ಗೆ ಹಣ ಜಮಾ ಆಗಿರುವ ಬಗ್ಗೆ ಬ್ಯಾಂಕ್‌ನಿಂದ ಮೆಸೇಜ್‌ ಬಂದಿದ್ದನ್ನು ಗಮನಿಸಿದ್ದಾನೆ. ಬಳಿಕ ಈ ಸಂಬಂಧ ಬ್ಯಾಂಕ್‌ನಲ್ಲಿ ವಿಚಾರಣೆ ನಡೆಸಿದಾಗ 3 ಸಾವಿರ ರೂ. ಪಿಂಚಣಿ ಬಂದಿರುವುದು ಗೊತ್ತಾಗಿದೆ. ಇಷ್ಟು ಮಾತ್ರ ಅಲ್ಲ, ಪತಿ ಜೀವಂತವಾಗಿರುವಾಗಲೇ ಪಿಂಚಣಿ ಪಡೆಯುತ್ತಿದ್ದವರ ಪಟ್ಟಿಯಲ್ಲಿ ತನ್ನ ಅತ್ತೆ ಹಾಗೂ ಅತ್ತಿಗೆಯೂ ಇರುವುದು ಗುರುತಿಸಿದ್ದಾನೆ.

ತನಿಖೆ ವೇಳೆ ಕೇವಲ ಸಂದೀಪ್‌ ಪತ್ನಿ ಮಾತ್ರವಲ್ಲದೆ, 22 ಮಹಿಳೆಯರು ಪತಿ ಜೀವಂತವಾಗಿರುವಾಗಲೇ ವಿಧವಾ ಪಿಂಚಣಿ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಧಿಕಾರಿಗಳಿಗೆ ದೂರು ಸಂದೀಪ್‌ ಕುಮಾರ್‌ ದೂರು ನೀಡಿದ್ದಾನೆ.

ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದ್ದು ಸರಕಾರಕ್ಕೆ ಇದೇ ಮಾದರಿಯಲ್ಲಿ ವಂಚಿಸುತ್ತಿರುವವರ ಸಂಖ್ಯೆ ಹೆಚ್ಚಿರುವ ಸಾಧ್ಯತೆಗಳಿವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸೀತಾ ವರ್ಮಾ ಹೇಳಿದ್ದಾರೆ.

Comments are closed.