
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪೈಲ್ವಾನ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಸುದೀಪ್ ಲುಕ್ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇತ್ತ ಸುದೀಪ್ ಪತ್ನಿ ಪ್ರಿಯಾ ರಾಧಕೃಷ್ಣ ಅವರು ಕೂಡ ಪತಿಯ ಲುಕ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾ ಅವರು, ಸುದೀಪ್ ಅವರನ್ನು ಈ ಲುಕ್ನಲ್ಲಿ ನೋಡುತ್ತೆನೆಂದು ಊಹೆ ಕೂಡ ಮಾಡಿಕೊಂಡಿರಲಿಲ್ಲ. ಅವರ ಶ್ರದ್ಧೆ, ಆತ್ಮಸ್ಥೈರ್ಯ, ಅವರಲ್ಲಿರುವ ಶಕ್ತಿ ಇಂದು ಪೈಲ್ವಾನ್ನಲ್ಲಿ ನಾವು ಕಾಣುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಪೈಲ್ವಾನ್ ಸಿನಿಮಾ ನಿರ್ಮಾಪಕರಾದ ಕೃಷ್ಣ ಅವರ ಟ್ವೀಟ್ನ್ನು ರಿಟ್ವೀಟ್ ಮಾಡಿರುವ ಪ್ರಿಯಾ ಅವರು, ಪತಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಪೋಸ್ಟರ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದ್ದು, ಜೊತೆಗೆ ಕುತೂಹಲವನ್ನು ಹೆಚ್ಚಿಸಿದೆ.
ಸುದೀಪ್ ಸಿನಿಮಾದಿಂದ ಸಿನಿಮಾಕ್ಕೆ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡುತ್ತಾರೆ. ಅಲ್ಲದೇ ಇತ್ತೀಚೆಗೆ ತೆರೆಕಂಡಿದ್ದ ವಿಲನ್ ಲುಕ್ನ್ನು ಕೂಡ ಹಲವು ಅಭಿಮಾನಿಗಳು ಫಾಲೋ ಮಾಡಿದ್ದರು. ಇತ್ತ ಪೈಲ್ವಾನ್ ಸಿನಿಮಾ ಹೊಸ ದಾಖಲೆಗಳನ್ನು ಬರೆಯಲು ಮುಂದಾಗಿದ್ದು, ಎಂಟು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಒಟ್ಟು 30 ರಿಂದ 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
Comments are closed.