ಕರ್ನಾಟಕ

ಮುಖ್ಯಮಂತ್ರಿ ಆಗುವ ಇಂಗಿತ: ಪರಮೇಶ್ವರ್​​ಗೆ ಕುಮಾರಸ್ವಾಮಿ ತಿರುಗೇಟು!

Pinterest LinkedIn Tumblr


ದಾವಣಗೆರೆ: “ಅವಕಾಶ ಸಿಕ್ಕರೆ ನಾನು ಕೂಡ ಮುಖ್ಯಮಂತ್ರಿ ಸ್ಥಾನ ನಿಭಾಯಿಸುತ್ತೇನೆ,” ಎಂಬ ಡಿಸಿಎಂ ಪರಮೇಶ್ವರ್​​ ಅವರ ಹೇಳಿಕೆ ಬಗ್ಗೆ ಕೊನೆಗೂ ಸಿಎಂ ಎಚ್​​.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ. “ಈ ವೇಳೆ ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ. ಬದಲಿಗೆ ಸಿಎಂ ಸ್ಥಾನ ನಿಭಾಯಿಸಲು ರಾಜ್ಯದಲ್ಲಿ ಸಾಕಷ್ಟು ನಾಯಕರಿದ್ಧಾರೆ,” ಎಂದು ಹೇಳುವ ಮುಖೇನ ಸಿಎಂ ಕುಮಾರಸ್ವಾಮಿಯವರು ಉಪ ಮುಖ್ಯಮಂತ್ರಿಗಳಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.

ಇನ್ನು “ಪರಮೇಶ್ವರ್​​ ಅವರು ತಮಗೆ ಸಿಎಂ ಆಗುವ ಅವಕಾಶ ಸಿಕ್ಕರೆ ಎಲ್ಲವನ್ನು ನಿಭಾಯಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ. ಈ ರೀತಿಯ ಸಾಮರ್ಥ್ಯ ಎಲ್ಲಾ ನಾಯಕರಲ್ಲೂ ಇರುತ್ತದೆ. ಅವಕಾಶ ಸಿಕ್ಕಾಗ ಎಲ್ಲರೂ ನಿಭಾಯಿಸಬಹುದು,” ಎನ್ನುವ ಮೂಲಕ ಸಿಎಂ ಎಚ್​​ಡಿ ಕುಮಾರಸ್ವಾಮಿ ಅವರು ಈ ವಿಚಾರಕ್ಕೆ ತೆರೆ ಎಳೆದಿದ್ಧಾರೆ.

ಈ ಹಿಂದೆ ಮೈತ್ರಿ ಸರ್ಕಾರದ ಗೃಹ ಸಚಿವ ಹಾಗೂ ಡಿಸಿಎಂ ಡಾ.ಜಿ ಪರಮೇಶ್ವರ್​​ ಅವರು ತಾವು ಮುಖ್ಯಮಂತ್ರಿ ಆಗಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ಈ ಹೇಳಿಕೆ ನೀಡಿದ್ದು, ಇದರ ಸುತ್ತ ಪರ-ವಿರೋಧ ಚರ್ಚೆಗಳು ಕೂಡ ನಡೆದವು. ಇದಕ್ಕೆ ಇಂದು ದಾವಣಗೆರಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ ಅವರು ಡಿಸಿಎಂ ಹೇಳಿಕೆಯನ್ನು ಹೀಗೆ ವ್ಯಾಖ್ಯಾನಿಸಿದರು.

ಇದೇ ವೇಳೆ ಮುಖ್ಯಮಂತ್ರಿಗಳು ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ ವಿಚಾರಕ್ಕೂ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಈಗಾಗಲೇ 100 ಕ್ಕೂ ಹೆಚ್ಚಿನ ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ರಾಜ್ಯಕ್ಕೆ ಬರ ಪರಿಹಾರ ಕಾರ್ಯಕ್ಕಾಗಿ 16 ಸಾವಿರ ಕೋಟಿ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಮೂರು ತಿಂಗಳ ಹಿಂದೆಯೇ ರಾಜ್ಯದಲ್ಲಿ ಅತಿವೃಷ್ಠಿಯಾದಾಗ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದರು.

ಅತಿವೃಷ್ಠಿ ವೇಳೆ 250 ಕೋಟಿ ರಾಜ್ಯ ಸರ್ಕಾರ ಭರಿಸಿದೆ. ಮನವಿ ಮಾಡಿದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಅನುದಾನ ನೀಡಿರಲಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಕುಮಾರಸ್ವಾಮಿ ಅವರು, ಪ್ರಧಾನಿಯನ್ನು ತೀಕ್ಷ್ಣವಾಗಿ ಮಾತಿನಲ್ಲೇ ತಿವಿದರು. ಅಲ್ಲದೇ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಇದೆ ವೇಳೆ ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಗಳ ಉದ್ಧಟತನ ಸಹಿಸಲು ಆಗದು. ನಮ್ಮಲ್ಲೂ ಅಸ್ತ್ರಗಳಿವೆ, ನಾವೂ ಅದನ್ನು ತೋರಿಸಬೇಕಾಗುತ್ತದೆ. ಸರ್ಕಾರವೂ ಬ್ಯಾಂಕುಗಳಲ್ಲಿ ಮುಂಗಡ ಠೇವಣಿ ಹಣ ಇಟ್ಟಿದೆ. ರೈತರಿಗೆ ಕಿರುಕುಳ ನೀಡಿದರೆ ವಾಪಸ್​​ ಪಡೆಯಲು ಹಿಂಜರಿಯುವುದಿಲ್ಲ ಎಂದರು. ಈ ಮೂಲಕ ಸಾಲ ಪಾವತಿ ಬಗ್ಗೆ ರೈತರಿಗೆ ನೊಟೀಸ್ ನೀಡಿದ ಖಾಸಗಿ ಬ್ಯಾಂಕುಗಳಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದರು.

Comments are closed.