ಕರ್ನಾಟಕ

ಕುಮಾರಸ್ವಾಮಿ 12 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದ್ದಾರೆ: ಜನಾರ್ದನ ರೆಡ್ಡಿ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ನನ್ನ ವಿರುದ್ಧದ 12 ವರ್ಷಗಳ ಹಿಂದಿನ ದ್ವೇಷವನ್ನು ತೀರಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಆ್ಯಂಬಿಡೆಂಟ್​ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ಇಂದು ಜಾಮೀನು ಮಂಜೂರಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

2006ರಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ವಿರುದ್ಧ 150 ಕೋಟಿ ರೂ. ಲಂಚದ ಆರೋಪ ಮಾಡಿದ್ದೆ, ಆ ನಂತರ ನನ್ನ ಮೇಲೆ ಸುಳ್ಳು ಕೇಸ್​ ಹಾಕಿದ್ದರು. ರೆಡ್ಡಿಯನ್ನು ಬಂಧನ ಮಾಡಬೇಕು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಈಗ 12 ವರ್ಷಗಳ ನಂತರ ಅವರು ನನ್ನನ್ನು ಬಂಧಿಸುವ ಮೂಲಕ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.

ನಾನು ಪ್ರಾಮಾಣಿಕವಾಗಿದ್ದೇನೆ, ಸತ್ಯ ನನ್ನ ಪರವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ ಯಾರು ಏನೇ ಎಂದರೂ ನೋಡೋಕೆ ಭಗವಂತ ಇದ್ದಾನೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್​ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಜನಾರ್ದನ ರೆಡ್ಡಿ, ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

Comments are closed.