ಕರ್ನಾಟಕ

ಹೆಲ್ಮೆಟ್ ಇಲ್ಲ ಅಂತ ತಡೆದವರಿಗೆ ಕೊಲೆ ಮಾಡಿ ಬಂದಿದ್ದೇನೆ ಎಂದು ಚಾಕು ತೋರಿಸಿದ

Pinterest LinkedIn Tumblr


ಚಿಕ್ಕಬಳ್ಳಾಪುರ: ಹಾಡಹಗಲೇ ಕಡಲೆಕಾಯಿ ಎಣ್ಣೆ ಮಾರಾಟ ಮಳಿಗೆಗೆ ಬಂದ ವ್ಯಕ್ತಿಯೊರ್ವ ಮಾಲೀಕನಿಗೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಪೊಲೀಸರ ಅತಿಥಿಯಾದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ನಗರದ ಬಜಾರ್ ರಸ್ತೆಯ ಗಂಗಮ್ಮ ಗುಡಿ ದೇವಾಲಯದ ಪಕ್ಕ ಅಡುಗೆ ಎಣ್ಣೆ ಅಂಗಡಿ ಇಟ್ಟುಕೊಂಡಿದ್ದ ಮಾಲೀಕ ದೇವರಾಜು ಚಾಕು ಇರಿತಕ್ಕೊಳಗಾದ ವ್ಯಕ್ತಿ. ದೇವನಹಳ್ಳಿ ಮೂಲದ ಸಂದೀಪ್ ಎಂಬಾತ ಚಾಕು ಇರಿದವ. ಅಂಗಡಿ ಮಾಲೀಕ ಮಾಲೀಕ ದೇವರಾಜು ಹಾಗೂ ಸಂದೀಪ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದರು. ವ್ಯವಹಾರದಲ್ಲಿ ದೇವರಾಜು ಸಂದೀಪ್ ಗೆ ಹಣ ಕೊಡಬೇಕಿತ್ತಂತೆ. ಹೀಗಾಗಿ ತನ್ನ ಹಣ ತನಗೆ ಕೊಡು ಅಂತ ಸಂದೀಪ್ ಹಲವು ಬಾರಿ ಕೇಳಿದ್ದನು. ನನ್ನ ಬಳಿ ಹಣ ಇಲ್ಲ ಏನ್ ಮಾಡಿಕೊಳ್ಳತ್ತಿಯೋ ಮಾಡಿಕೋ ಎಂದು ದೇವರಾಜುಅವಾಜ್ ಹಾಕಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ದೇವರಾಜು ಮಾತುಗಳಿಂದ ಕೋಪಗೊಂಡ ಸಂದೀಪ್ ಮೊದಲೇ ಎಲ್ಲ ಪ್ಲಾನ್ ಮಾಡಿಕೊಂಡು ಇಂದು ಅಂಗಡಿಗೆ ಬಂದಿದ್ದಾನೆ. ಈ ವೇಳೆ ಸಂದೀಪ್ ಮತ್ತೆ ಹಣ ನೀಡುವಂತೆ ಕೇಳಿದ್ದಾನೆ. ದೇವರಾಜು ನನ್ನ ಬಳಿ ಹಣ ಇಲ್ಲ ಹೇಳಿದಾಗ ಕೋಪಗೊಂಡ ಸಂದೀಪ್ ತಂದಿದ್ದ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ದೇವರಾಜು ಚೀರಾಟ ಕೇಳಿ ಪಕ್ಕದ ಅಂಗಡಿ ಮಾಲೀಕ ರಕ್ಷಣೆಗೆ ಮುಂದಾಗಿದ್ದಾರೆ. ಸಂದೀಪ್ ಆತನಿಗೆ ಬೆದರಿಸಿ ದೇವರಾಜು ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಆರೋಪಿ ಸಿಕ್ಕಿದ್ದು ಹೇಗೆ?
ಚಾಕುವಿನಿಂದ ಇರಿದು ಕೊಲೆ ಮಾಡಿಬಿಟ್ಟಿದ್ದೀನಿ ಅಂತ ತನ್ನ ಅಪಾಚಿ ಬೈಕ್ ನಲ್ಲಿ ಎಸ್ಕೇಪ್ ಆಗುತ್ತಿದ್ದ ಸಂದೀಪ್ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ವಿಚಿತ್ರ ಅಂದ್ರೆ ಘಟನಾ ಸ್ಥಳದಿಂದ ಹಳೆಯ ಎಸ್ ಪಿ ಕಚೇರಿ ವೃತ್ತದ ಮೂಲಕ ಎಂ ಜಿ ರಸ್ತೆ ಕಡೆ ಸಂದೀಪ್ ಹೊರಟಿದ್ದನು. ಇದೇ ಮಾರ್ಗದಲ್ಲಿ ಟ್ರಾಫಿಕ್ ಎಎಸ್ ಐ ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ದಂಡ ವಿಧಿಸುತ್ತಿದ್ದರು. ಹೆಲ್ಮೆಟ್ ಇಲ್ಲದೇ ಬಂದ ಸಂದೀಪ್ ನನ್ನು ಪೊಲೀಸರು ದಂಡ ಹಾಕಲು ನಿಲ್ಲಿಸಿದ್ದಾರೆ.

ಈ ವೇಳೆ ಭಯಗೊಂಡಿದ್ದ ಸಂದೀಪ್, ತಾನು ಕೊಲೆ ಮಾಡಿ ಬಂದಿದ್ದೇನೆ ಎಂದು ಚಾಕು ತೋರಿಸಿದ್ದಾನೆ. ಆದ್ರೆ ನಾನು ತಪ್ಪಿಸಿಕೊಂಡು ಹೋಗುತ್ತಿರಲಿಲ್ಲ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಶರಣಾಗಲು ಹೊರಟ್ಟಿದ್ದೇನೆ ಎಂದು ತಿಳಿಸಿದ್ದಾನೆ. ಆರೋಪಿಯ ಮಾತು ಕೇಳಿ ಒಂದು ಕ್ಷಣ ಶಾಕ್ ಗೆ ಒಳಗಾದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೇವರಾಜು ಹೊಟ್ಟೆ, ಕೈ, ಕುತ್ತಿಗೆ ಸೇರಿದಂತೆ ಐದಾರು ಕಡೆ ತೀವ್ರ ಇರಿತಗಳಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಂದೀಪ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Comments are closed.