ಬೆಂಗಳೂರು: ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ನಾಡಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಸಂಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2015ರ ಅಕ್ಟೋಬರ್ 15ರಂದು ವಿಶ್ವಸಂಸ್ಥೆಯ 67ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ವೇಳೆ ಅನಂತ್ ಕುಮಾರ್ ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದ್ದರು. ವಿಶ್ವಸಂಸ್ಥೆಯಲ್ಲಿ ಅನಂತ್ ಕುಮಾರ್ ಅವರು ಕನ್ನಡದಲ್ಲಿ ಸ್ವಾಗತ ಕೋರಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆ ತಂದಿತ್ತು.
‘ಸನ್ಮಾನ್ಯ ಅಧ್ಯಕ್ಷರೇ ಮತ್ತು ವಿಶ್ವದ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ ನಿಮ್ಮೆಲ್ಲರಿಗೂ ನನ್ನ ಮುಂಜಾನೆಯ ಶುಭಾಶಯಗಳು…’ ಎಂದು ಅನಂತ್ಕುಮಾರ್ ಭಾಷಣ ಆರಂಭಿಸಿದ್ದರು. ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅನಂತ್ ಕುಮಾರ್, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ಕನ್ನಡ ನಾಡು, ನುಡಿಯ ಹಿರಿಮೆಯನ್ನು ಹೆಚ್ಚಿಸಿದ್ದರು.
ಜಾಗತಿಕ ಮಟ್ಟದಲ್ಲಿ ಅಪರಾಧ ಕೃತ್ಯಗಳ ಬಗ್ಗೆ ವಿಚಾರಣೆ ನಡೆಸುವ ಮೆಕ್ಯಾನಿಕಲ್ ಫಾರ್ ಇಂಟರ್ ನ್ಯಾಷನಲ್ ಕ್ರಿಮಿನಲ್ ಟ್ರೆಬ್ಯೂನಲ್ (ಎಂಐಸಿಟಿ) ಕಾರ್ಯ ವಿಧಾನ ತೃಪ್ತಿಕರವಾಗಿದೆ. ಆದರೆ, ಇನ್ನಷ್ಟು ಸುಧಾರಣೆಗೆ ಅವಕಾಶವಿದೆ ಎಂದು ಅನಂತ್ ಕುಮಾರ್ ಕನ್ನಡದಲ್ಲಿಯೇ ಹೇಳಿದ್ದರು. ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಒಡಂಬಡಿಕೆಗಳಿಗೆ ಕನ್ನಡದಲ್ಲಿಯೇ ಸಹಿ ಹಾಕಿದ್ದರು.
Comments are closed.