ಕರ್ನಾಟಕ

ಬಂಧನದ ಬಳಿಕ ತನ್ನ ವಕೀಲನ ವಿರುದ್ಧವೇ ಹರಿಹಾಯ್ದ ಜನಾರ್ಧನ ರೆಡ್ಡಿ !

Pinterest LinkedIn Tumblr

ಬೆಂಗಳೂರು: ಆಂಬಿಡೆಂಟ್​ ಕಂಪನಿ ವಂಚನೆ ಪ್ರಕರಣದ ಡೀಲ್​ವೊಂದರಲ್ಲಿ ಪ್ರಮುಖ ಆರೋಪಿ ಫರೀದ್​ ಜೊತೆ ಕೈ ಜೋಡಿಸಿದ್ದ ಆರೋಪದ ಮೇಲೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ವಕೀಲರ ವಿರುದ್ಧ ಹರಿಹಾಯ್ದಿದ್ದಾರೆ.

ಸಿಸಿಬಿ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ರೆಡ್ಡಿಗೆ ತಮ್ಮ ವಕೀಲರ ಮಾತು ಕೇಳಿ ಕೆಟ್ಟೆ ಎಂದು ಕಿಡಿ ಕಾರಿದ್ದಾರೆ ಎಂದು ಹೇಳಲಾಗಿದೆ. ತಮ್ಮನ್ನು ಸಂಕಷ್ಟಕ್ಕೆ ತಂದಿಟ್ಟ ಲಾಯರ್ ವಿರುದ್ಧ ಗುಡುಗಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದು ಹಾಗೂ ಹೈಕೋರ್ಟ್ ನಲ್ಲಿ ಎಫ್ ಐ ಆರ್ ವಜಾಗೊಳಿಸುವಂತೆ ಅರ್ಜಿ ಸಲ್ಲಿಸುದನ್ನು ಬಿಟ್ಟು ಪೊಲೀಸರ ಮುಂದೆ ಶರಣಾಗುವಂತೆ ವಕೀಲರು ಸಲಹೆ ನೀಡಿದ್ದರ ಎನ್ನಲಾಗಿದೆ.

ಪೊಲೀಸರು ರೆಡ್ಡಿ ಗಾಗಿ ಹುಡುಕಾಟ ನಡೆಸುತ್ತಿರುವಾಗ, ತಾವು ನಾಪತ್ತೆಯಾಗಿಲ್ಲ ಎಂಬ ವಿಡಿಯೋ ಮಾಡಿ ರೆಡ್ಡಿ ಮೀಡಿಯಾ ಹೌಸ್ ಗಳಿಗೆ ಕಳುಹಿಸಿ ತಾವು ಬೆಂಗಳೂರಿನಲ್ಲಿಯೇ ಇರುವುದಾಗಿ ತಿಳಿಸಿದ್ದರು, ಜೊತೆಗೆ ತಾವು ಪೊಲೀಸರು ಮತ್ತು ಕೋರ್ಟ್ ಮುಂದೆ ಹಾಜರಾಗುವುದಾಗಿ ತಿಳಿಸಿದ್ದರು, ಇದೆಲ್ಲಾವನ್ನು ರೆಡ್ಡಿ ತಮ್ಮ ಪರ ವಕೀಲರ ಸಲಹೆಯಂತೆ ಮಾಡಿದ್ದರು.

ಆದರೆ ಭಾನುವಾರ ಬೆಳಗ್ಗೆ ತಮ್ಮ ಬಂಧನ ಖಚಿತವಾಗುತ್ತಿದ್ದಂತೆ ತಾವು ವಕೀಲ ಮಾತು ಕೇಳಿ ತಪ್ಪು ಮಾಡಿದ್ದೆ ಎಂದು ರೆಡ್ಡಿಗೆ ತಿಳಿದು ಬಂದಿದೆ.

ತಮ್ಮನ್ನು ಬಂಧಿಸಲಾಗುತ್ತದೆ ಎಂಬ ವಿಷಯವನ್ನು ತಿಳಿಯುತ್ತಿದ್ದಂತೆಯೇ ರೆಡ್ಡಿ ಮಾನಸಿಕವಾಗಿ ತುಂಬಾ ವಿಚಲಿತರಾಗಿದ್ದರು, ಅಲ್ಲಿಯವರೆಗೂ ವಕೀಲರ ಮಾತನ್ನು ಶಾಂತವಾಗಿ ಕೇಳುತ್ತಿದ್ದ ರೆಡ್ಡಿ ಏಕಾಏಕಿ ವಕೀಲರನ್ನು ಬೈಯ್ಯ ತೊಡಗಿದರು. ರೆಡ್ಡಿ ಮನವೊಲಿಸಲು ಪ್ರಯತ್ನಿಸುತ್ತಿದ್ದ ವಕೀಲರ ಮಾತು ಕೇಳುವ ಮೂಡ್ ನಲ್ಲಿ ರೆಡ್ಡಿ ಇರಲಿಲ್ಲ, ಪೊಲೀಸರ ಬಳಿ ದೊಡ್ಡ ಸಾಕ್ಷಿ ಇದೆ ಎಂಬ ಬಗ್ಗೆ ತಮಗೂ ಮಾಹಿತಿಯಿರಲಿಲ್ಲ ಎಂದು ವಕೀಲರು ಹೇಳಿ ಅವರ ಬಳಿ ಕ್ಷಮೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ರೆಡ್ಡಿ ನಮ್ಮ ಮುಂದೆ ಹಾಜರಾಗದಿದ್ದರೇ ಕೊರ್ಟ್ ನಿಂದ ರಿಲೀಫ್ ಪಡೆದುಕೊಳ್ಳಲು ಸಮಯ ಸಿಗುತ್ತಿತ್ತು. ಅವರ ವಿರುದ್ದ ಸಂಗ್ರಹವಾಗಿರುವ ಸಾಕ್ಷ್ಯದ ಬಗ್ಗೆ ಅರಿವಿಲ್ಲದೇ ರೆಡ್ಡಿ ತಮ್ಮ ಮುಂದೆ ಹಾಜರಾಗಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಸದ್ಯ ಪರಪ್ಪನ‌ ಅಗ್ರಹಾರ ತಲುಪಿರುವ ಗಾಲಿ ಜನಾರ್ದನ ರೆಡ್ಡಿಗೆ ಜೈಲಿನ ಪ್ರೊಸೀಜರ್​ ಮುಗಿಸಿ ವಿಚಾರಣಾಧೀನ ಖೈದಿ ಸಂಖ್ಯೆ 10902 ನೀಡಲಾಗಿದೆ. ಸದ್ಯ ಈ‌ ಹಿಂದೆ ವಿಐಪಿಗಳಿದ್ದ ಕೊಠಡಿಯನ್ನೇ ನೀಡಲಾಗಿದ್ದು, ಈ ಹಿಂದೆ ಜನಾರ್ದನ ರೆಡ್ಡಿ ಇದೇ ಕೊಠಡಿಯಲ್ಲಿ ಇದ್ದರಂತೆ.

Comments are closed.