ಕಲಬುರ್ಗಿ: ಮಾಜಿ ಸಿಎಂ ಯಡಿಯೂರಪ್ಪ ಕೆಜೆಪಿ ಕಟ್ಟಿ ಟಿಪ್ಪು ಸಮಾಧಿ ಮತ್ತಿತರ ಕಡೆ ಭೇಟಿ ಕೊಟ್ಟು ಕೆಟ್ಟಿದ್ದರು. ಈಗ ಬಿಜೆಪಿಗೆ ಬಂದು ಉದ್ಧಾರವಾಗುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಟಿಪ್ಪು ತಂಟೆಗೆ ಹೋದವರೆಲ್ಲಾ ಹಾಳಾಗಿದ್ದಾರೆ ಎಂದರು. ಟಿಪ್ಪು ಖಡ್ಗ ಖರೀದಿಸಿದ ವಿಜಯ ಮಲ್ಯ ದೇಶವನ್ನೇ ಬಿಟ್ಟು ಓಡಿ ಹೋದ. ನಂತರ ಟಿಪ್ಪು ಜಯಂತಿ ಮಾಡಿ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಂಡರು. ಕೆಜೆಪಿಯಲ್ಲಿದ್ದಾಗ ಯಡಿಯೂರಪ್ಪ ಅವರೂ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಕೆಟ್ಟು ಹೋಗಿದ್ದರು. ಅದನ್ನು ನಾನು ಈಗಲೂ ಖಂಡಿಸುತ್ತೇನೆ. ಯಡಿಯೂರಪ್ಪ ಬಿಜೆಪಿಗೆ ಬಂದ ನಂತರ ಉದ್ಧಾರವಾಗುತ್ತಿದ್ದಾರೆ ಎಂದರು.
ಟಿಪ್ಪು ಜಯಂತಿಯಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪಲಾಯನ ಮಾಡಿದ್ದಾರೆ. ಜೆಡಿಎಸ್ ಕಚೇರಿಯಲ್ಲಿಯೂ ಈ ಬಾರಿ ಟಿಪ್ಪು ಜಯಂತಿ ಆಚರಿಸಿಲ್ಲ. ಕೆಲ ಕಾಂಗ್ರೆಸ್ ನಾಯಕರೂ ಈ ಬಾರಿ ಟಿಪ್ಪು ಜಯಂತಿಯಿಂದ ದೂರ ಉಳಿದು ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಇವರೆಂತಹ ಜಾತ್ಯತೀತವಾದಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂರಿಗೆ ಈಗ ಇವರ ಬಗ್ಗೆ ಅರ್ಥವಾಗುತ್ತದೆ ಎಂದು ಕಿಡಿಕಾರಿದರು.
ಟಿಪ್ಪು ಜಯಂತಿಯನ್ನು ಮುಸಲ್ಮಾನರು ಬೇಕಿದ್ದರೆ ಆಚರಿಸಿಕೊಳ್ಳಲಿ. ಆದರೆ ಅದನ್ನು ಸರ್ಕಾರವೇ ಆಚರಿಸುವುದು ಸರಿಯಲ್ಲ. ಸರ್ಕಾರ ಆಚರಿಸಿದರೂ ಹೀಗೆ ಸಿಎಂ ಮತ್ತು ಡಿಸಿಎಂ ಪಲಾಯನ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ಗೆ ಈಗ ಬುದ್ಧಿ ಬಂದಂತಿದೆ. ಜಯಂತಿಯಲ್ಲಿ ಪಾಲ್ಗೊಂಡರೆ ಹಾಳಾಗುತ್ತೇವೆ ಎಂದ ಆತಂಕದಿಂದ ಅವರು ದೂರ ಉಳಿದಿದ್ದಾರೆ ಎಂದರು.
ರೆಡ್ಡಿ ಬಿಜೆಪಿ ಪರ ಕೆಲಸ ಮಾಡುತ್ತಿಲ್ಲ:
ಜನಾರ್ದನ ರೆಡ್ಡಿ ಮೇಲಿನ ಸಿಸಿಬಿ ತನಿಖೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ರೆಡ್ಡಿ ನಮ್ಮ ಪಕ್ಷದಲ್ಲಿಯೇ ಇಲ್ಲ. ಬಿಜೆಪಿ ಪರ ಕೆಲಸ ಮಾಡುತ್ತಿಲ್ಲ. ಹೀಗಿರಬೇಕಾದರೆ ಅವರ ಬಗ್ಗೆ ಮಾತನಾಡುವ ಪ್ರಶ್ನೆಯೇ ಬರುವುದಿಲ್ಲ ಎಂದರು. ಉಪ ಚುನಾವಣೆ ಸಂದರ್ಭದಲ್ಲಿ ಸಿದ್ಧರಾಮಯ್ಯನ ಮಗನ ಕುರಿತು ರೆಡ್ಡಿ ನೀಡಿದ ಹೇಳಿಕೆ ಬಿಜೆಪಿಗೆ ಮುಳವಾಯಿತೆಂಬ ವಾದವನ್ನು ಈಶ್ವರಪ್ಪ ಅಲ್ಲಗಳೆದರು.
ಉಪ ಚುನಾವಣೆ ಸೋಲಿನ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಸೋಲು-ಗೆಲುವು ಯಾವುದೇ ವ್ಯಕ್ತಿಯ ಮೇಲೆ ನಿಂತಿಲ್ಲ. ಸೋಲಿಗೆ ಯಡಿಯೂರಪ್ಪ ಅವರನ್ನು ಹೊಣೆಗಾರರನ್ನಾಗಿಸುವುದಿಲ್ಲ. ಈಗಲೂ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಪಕ್ಷದ ಸಂಘಟನೆ ಕೊರತೆಯಿಂದ ಉಪ ಚುನಾವಣೆಯಲ್ಲಿ ಸೋತಿರುವುದು ಸತ್ಯ. ಪಕ್ಷದ ಸಂಘಟನೆಯಲ್ಲಿ ಏನಾದರೂ ಬದಲಾವಣೆ ತರುವುದಿದ್ದಲ್ಲಿ, ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
Comments are closed.