
ಬೆಂಗಳೂರು: ಸೊಳ್ಳೆಗಳಿಂದ ಹರಡುವ ಮಾರಣಾಂತಿಕ ಝಿಕಾ ವೈರಸ್ ಬಗ್ಗೆ ಇತ್ತೀಚೆಗೆ ಚರ್ಚೆಗಳು ಹೆಚ್ಚಾಗಿವೆ. ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ ಝಿಕಾ ವೈರಸ್ನ ಮೂಲವನ್ನು ಕೆದಕುತ್ತ ಹೋದರೆ 1952ರಲ್ಲೇ ಈ ವೈರಸ್ ಕಾಣಿಸಿಕೊಂಡಿತ್ತು ಎಂಬ ಮಾಹಿತಿ ಸಿಗುತ್ತದೆ.
ಸದ್ಯಕ್ಕೆ ಅಮೆರಿಕ, ಬ್ರೆಜಿಲ್ನಲ್ಲಿ ಹೆಚ್ಚಾಗಿರುವ ಝಿಕಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲವು ಮುನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ಪ್ರಮುಖವಾಗಿ ಸೊಳ್ಳೆಗಳಿಂದ ಹರಡುವ ಈ ಝಿಕಾ ವೈರಸ್ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ. ಗರ್ಭಿಣಿ ಮಹಿಳೆಯಲ್ಲೇನಾದರೂ ಝಿಕಾ ವೈರಸ್ ಕಾಣಿಸಿಕೊಂಡರೆ ಹುಟ್ಟುವ ಮಗುವಿನ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಝಿಕಾ ವೈರಸ್ನ ಲಕ್ಷಣಗಳು:
ಡೆಂಗ್ಯು ರೋಗದ ಲಕ್ಷಣಗಳೇ ಝಿಕಾ ವೈರಸ್ನಿಂದಲೂ ಕಾಣಿಸಿಕೊಳ್ಳುತ್ತದೆ. ಈ ವೈರಸ್ ಹರಡಿರುವವರ ದೇಹದಲ್ಲಿ ಜಾಂಡಿಸ್ ರೋಗಿಗಳ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಂಪು ಕಣ್ಣು, ಜ್ವರ, ಗಂಟು ನೋವು, ತಲೆನೋವು, ಅಸ್ವಸ್ಥತೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಎಡಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಈ ವೈರಸ್ ದೇಹವನ್ನು ಆವರಿಸಿದರೆ ಮೆದುಳಿನ ಆರೋಗ್ಯ ಹದಗೆಟ್ಟು ಜೀವಕ್ಕೇ ಮಾರಕವಾಗಬಹುದು.
ಭಾರತಕ್ಕೂ ಕಾಲಿಟ್ಟಿದೆ:
ಡೆಂಗ್ಯು, ಚಿಕನ್ಗುನ್ಯಾ, ಮಲೇರಿಯ, ಹಂದಿಜ್ವರದಂತಹ ರೋಗಗಳಿಂದ ತತ್ತರಿಸಿರುವ ಭಾರತಕ್ಕೂ ಕಾಲಿಟ್ಟಿರುವ ಝಿಕಾ ವೈರಸ್ ಜನರಲ್ಲಿ ಆತಂಕ ಸೃಷ್ಟಿಸಿದೆ. ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ 50ಕ್ಕೂ ಹೆಚ್ಚು ಝಿಕಾ ವೈರಸ್ ಪ್ರಕರಣಗಳು ದಾಖಲಾಗಿದ್ದವು. ಸರಿಯಾದ ಸಮಯದಲ್ಲಿ ರೋಗವನ್ನು ಪತ್ತೆಹಚ್ಚಿ, ಚಿಕಿತ್ಸೆ ಪಡೆದುಕೊಂಡರೆ ಈ ರೋಗದ ದುಷ್ಪರಿಣಾಮದಿಂದ ಪಾರಾಗಬಹುದು.
1947ರಲ್ಲಿ ಉಗಾಂಡದಲ್ಲಿ ಕಾಣಿಸಿಕೊಂಡ ಈ ವೈರಸ್ಗೆ 1952ರಲ್ಲಿ ಝಿಕಾ ಎಂದು ಹೆಸರಿಡಲಾಯಿತು. 2014ರಲ್ಲಿ ಪೆಸಿಫಿಕ್ ಸಾಗರದಿಂದ ಫ್ರೆಂಚ್ ಪಾಲಿನೆಷಿಯದವರೆಗೆ ಹರಡಿತು. ಮೆಕ್ಸಿಕೋ ಮತ್ತು ಸೆಂಟ್ರಲ್ ಅಮೆರಿಕದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡ ನಂತರ 2015ರಿಂದ ಎಲ್ಲ ಕಡೆ ಹರಡಲಾರಂಭಿಸಿತು.
ಝಿಕಾ ಎಂಬ ಹೆಸರು ಬಂದಿದ್ದು ಹೇಗೆ?:
ಈ ವೈರಸ್ಗೆ ಝಿಕಾ ಎಂಬ ಹೆಸರು ಬಂದಿದ್ದು ಹೇಗೆಂಬ ಬಗ್ಗೆ ನಿಮಗೆ ಕುತೂಹಲ ಇರಬಹುದು. 1947ರಲ್ಲಿ ಪೂರ್ವ ಆಫ್ರಿಕಾದ ಹಳದಿ ಜ್ವರದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದರು.ಆಫ್ರಿಕಾದ ಝಿಕಾ ಎಂಬ ಕಾಡಿನಲ್ಲಿ ರೆಸಸ್ ಮಕಾವ್ ಎಂಬ ಜಾತಿಯ ಮಂಗಗಳ ಮೇಲೆ ಅವರು ತಮ್ಮ ಪ್ರಯೋಗ ನಡೆಸುತ್ತಿದ್ದರು. ಈ ಸಂಶೋಧನೆಯ ವೇಳೆ ಅವರಿಗೆ ಹೊಸತೊಂದು ವೈರಸ್ನ ಬಗ್ಗೆ ತಿಳಿಯಿತು. ನಂತರ ತಾವು ಕಂಡುಹಿಡಿದ ವೈರಸ್ಗೆ ಝಿಕಾ ವೈರಸ್ ಎಂದು ಹೆಸರಿಟ್ಟರು.
ಮೊದಲು ಆಫ್ರಿಕಾದಲ್ಲಿ ಮಾರಣಾಂತಿಕವಾಗಿ ಕಾಣಿಸಿಕೊಂಡ ಝಿಕಾ ವೈರಸ್ ಬಳಿಕ ಜಗತ್ತಿನ ವಿವಿಧ ದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಮೊದಲು ಡೆಂಗ್ಯು ಮತ್ತು ಚಿಕನ್ಗುನ್ಯಾ ರೀತಿಯಲ್ಲೇ ಈ ರೋಗದ ಲಕ್ಷಣಗಳು ಇದ್ದುದರಿಂದ ವೈದ್ಯರಿಗೆ ಈ ರೋಗವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ, ರಕ್ತಪರೀಕ್ಷೆ ನಡೆಸಿದ ನಂತರ ಅವರ ರಕ್ತದಲ್ಲಿ ಝಿಕಾ ವೈರಸ್ನ ಆರ್ಎನ್ಎ ಅಂಶ ಪತ್ತೆಯಾಯಿತು.
ಪತ್ತೆ ಹಚ್ಚುವುದು ಹೇಗೆ?
ರಕ್ತ, ಮೂತ್ರ, ಸಲೈವಾ ಪರೀಕ್ಷೆ ಮಾಡುವ ಮೂಲಕ ಝಿಕಾ ವೈರಸ್ ಅನ್ನು ಪತ್ತೆ ಹಚ್ಚಬಹುದು. ಇಲ್ಲಿಯವರೆಗೂ ಝಿಕಾ ವೈರಸ್ಗೆ ಜಗತ್ತಿನಲ್ಲಿ ಝಿಕಾ ವೈರಸ್ ತಡೆಗಟ್ಟಲು ಪರಿಣಾಮಕಾರಿಯಾದ ಲಸಿಕೆಯನ್ನು ಕಂಡಿ ಹಿಡಿದಿಲ್ಲ. ಈ ಮಾರಣಾಂತಿಕ ವೈರಸ್ ಭಯ 80ಕ್ಕೂ ಹೆಚ್ಚು ದೇಶಗಳನ್ನು ಆವರಿಸಿಕೊಂಡಿದೆ.
Comments are closed.