ಕರ್ನಾಟಕ

ಬಿಜೆಪಿ, ಸಂಘಪರಿವಾರದ ವಿರೋಧದ ನಡುವೆ ನಡೆದ ಟಿಪ್ಪು ಜಯಂತಿ; ಹಲವೆಡೆ ಪ್ರತಿಭಟನಾಕಾರರು ವಶಕ್ಕೆ

Pinterest LinkedIn Tumblr

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ಸಮರ್ಥನೆ ಹಾಗೂ ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರೋಧದ ನಡುವೆ ಶನಿವಾರ ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ.

ಬಿಜೆಪಿ, ಸಂಘ ಪರಿವಾರದವರ ತೀವ್ರ ವಿರೋಧದ ನಡುವೆ ಕೂಡ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸರಳವಾಗಿ ಟಿಪ್ಪು ಜಯಂತಿ ಆಚರಣೆ ನಡೆಯಿತು. ಸಮಾರಂಭಕ್ಕೆ ಆಗಮಿಸಬೇಕಿದ್ದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಕೂಡ ಕೊನೆ ಕ್ಷಣದಲ್ಲಿ ಗೈರಾಗಿದ್ದರು.

ಇಂದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ ಕೇವಲ ಕಾಂಗ್ರೆಸ್ ಕಾರ್ಯಕ್ರಮವಾಗಿತ್ತು. ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅನುಪಸ್ಥಿತಿಯಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಉದ್ಘಾಟಿಸಿದರು. ಆಹಾರ ಪೂರೈಕೆ ಖಾತೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಮತ್ತು ಇತರ ಕೆಲವು ನಾಯಕರಿದ್ದರು.

ಬಿಜೆಪಿಯಿಂದ ಭಾರೀ ಪ್ರತಿಭಟನೆ ನಿರೀಕ್ಷಿಸಿದ್ದರಿಂದ ವಿಧಾನಸೌಧ ಮತ್ತು ಸುತ್ತಮುತ್ತ ತೀವ್ರ ಕಾರ್ಯಪಡೆ ಸಿಬ್ಬಂದಿ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು 500 ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ನಗರದ ವಿವಿಧ ವಲಯಗಳ ಡಿಸಿಪಿಗಳು ಆಯಾ ವಲಯಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಿದ್ದಾರೆ.

ನಗರದಾದ್ಯಂತ ಸುಮಾರು 15 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ನಾಯಕ ಫ್ರಾಂಕ್ಲಿನ್ ಮೊಂಟೆರೊ ಮತ್ತು ಅವರ ಸಹಚರರು ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶಿಸಿ ಗದ್ದಲ ನಡೆಸಲು ಮುಂದಾಗಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಂಡು ಕಸ್ಟಡಿಗೊಪ್ಪಿಸಲಾಯಿತು. ಇಲ್ಲಿ ಕೂಡ ಜೆಡಿಎಸ್ ಶಾಸಕರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

2015ರಲ್ಲಿ ತೀವ್ರ ಹಿಂಸಾಚಾರ ಮತ್ತು ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತ ಕುಟ್ಟಪ್ಪ ಸಾವಿನಲ್ಲಿ ಅಂತ್ಯ ಕಂಡಿದ್ದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಇದುವರೆಗೆ ಪರಿಸ್ಥಿತಿ ಶಾಂತವಾಗಿದೆ. ಸಾಯಂಕಾಲದವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಮತ್ತು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಕೊಡಗಿನ ಪೊಲೀಸ್ ಸೂಪರಿಂಟೆಂಡೆಂಟ್ ಸುಮನಾ ಡಿ ಪಣ್ಣೆಕಾರ ತಿಳಿಸಿದ್ದಾರೆ. ಇಲ್ಲಿ ಶಾಲಾ ಕಾಲೇಜುಗಳು ಮತ್ತು ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿವೆ.

Comments are closed.