ಕರ್ನಾಟಕ

ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿಯನ್ನು ಯಾವ ಗುಂಪಿಗೆ ಸೇರಿಸ್ತಿರಿ? ಟಿಪ್ಪು ವಿರೋಧಿಗಳನ್ನೂ ಪ್ರಶ್ನಿಸಿದ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುತ್ತಿರುವಂತೆಯೇ ಅತ್ತ ಕಾಂಗ್ರೆಸ್ ಮುಖಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಟಿಪ್ಪು ಜಯಂತಿಗೆ ವಿರೋಧ ಮುಂದುವರೆದಿರುವಂತೆಯೇ ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿ ಶುಭಕೋರಿದ್ದು, ಸರಣಿ ಟ್ವೀಟ್ ಮೂಲಕ ಟಿಪ್ಪುವನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ ಟಿಪ್ಪು ಜಯಂತಿ ವಿರೋಧಿಗಳನ್ನೂತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅಂತೆಯೇ ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ. ಒಬ್ಬ ದೇಶಪ್ರೇಮಿ, ಜಾತ್ಯತೀತ ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹ ಎಂದು ಕಿಡಿಕಾರಿದ್ದಾರೆ.

ಟಿಪ್ಪು ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ವೈರಿಗಳಾಗಿದ್ದ ಬ್ರಿಟಿಷ್ ಇತಿಹಾಸಕಾರರಿಂದಲ್ಲ. ಟಿಪ್ಪು ಬಗ್ಗೆ ಮೈಸೂರು ಭಾಗದಲ್ಲಿ ಲಾವಣಿಗಳಿವೆ. ಅವುಗಳಲ್ಲಿ ಟಿಪ್ಪುವಿನ ದೇಶಪ್ರೇಮ, ಜಾತ್ಯತೀತ ಧೋರಣೆ, ಅಭಿವೃದ್ದಿಯ ಕಲ್ಪನೆಗಳ ಮಾಹಿತಿ ಇದೆ. ಈ ಲಾವಣಿ, ಪದ, ಹಾಡುಗಳೇ ನಿಜವಾದ ಇತಿಹಾಸ ಎಂದು ತಿಳಿಸಿದ್ದಾರೆ.

ಸರ್ಕಾರವೇ ಜಯಂತಿಗಳನ್ನು ಆಚರಿಸುವುದಕ್ಕೆ ಕಾರಣವಿದೆ. ಇದನ್ನು ಸಾರ್ವಜನಿಕರಿಗೆ ಬಿಟ್ಟರೆ ತಮ್ಮ ಜಾತಿ-ಧರ್ಮಗಳಿಗೆ ಸೇರಿರುವ ಮಹಾಪುರುಷ-ಮಹಿಳೆಯರ ಜಯಂತಿ ಆಚರಣೆಯನ್ನಷ್ಟೇ ಮಾಡಿ ಅವರನ್ನು ತಮ್ಮ ಜಾತಿ-ಧರ್ಮಗಳಿಗೆ ಸೀಮಿತಗೊಳಿಸುತ್ತಾರೆ. ಇದು ಮಹಾನ್ ವ್ಯಕ್ತಿಗಳಿಗೆ ಅಗೌರವವೂ ಹೌದು. ಮಹಾಪುರುಷ-ಮಹಿಳೆಯರ ಜಯಂತಿ ಆಚರಣೆಯ ಸಂಪ್ರದಾಯವನ್ನು ಹಿಂದಿನ ನಮ್ಮ ಸರ್ಕಾರ ಹುಟ್ಟುಹಾಕಿದ್ದಲ್ಲ, ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಜಯಂತಿ ಆಚರಣೆ ಪಟ್ಟಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುತ್ತಾ ಬಂದಿವೆ. ಆಗ ಕಾಣಿಸಿಕೊಳ್ಳದ ಪ್ರತಿರೋಧ ಟಿಪ್ಪು ಆಚರಣೆ ಬಗ್ಗೆ ಮಾತ್ರ ಯಾಕೆ ಎಂದು ಕಿಡಿಕಾರಿದ್ದಾರೆ.

Comments are closed.