
ಬೆಂಗಳೂರು: ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಸರಿಯಾದ ಸಿದ್ದತೆ ಮಾಡಿಕೊಂಡಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಗೆಲುವು ಸಾಧಿಸುತ್ತಿದ್ದರು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಉಪ ಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮೊದಲಿಗೆ ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ ಕೋರಿದರು. ನಂತರ ಮಾತನಾಡಿದ ಅವರು, ಇಂದು 3 ಲೋಕಸಭಾ ಮತ್ತು 2 ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗದಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡಿದ್ದರೆ ಮಧುಬಂಗಾರಪ್ಪ ಗೆಲ್ಲುತ್ತಿದ್ದರು ಎಂದರು.
ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಕೊನೆ ಕ್ಷಣದಲ್ಲಿ ಸ್ಪರ್ಧಿಸಲಾಯಿತು. ಯಾವುದೇ ಸಿದ್ದತೆಗಳಿಲ್ಲದಿದ್ದರೂ ಸಹ ಕಾಂಗ್ರೆಸ್ ನಾಯಕರ ಸಲಹೆ ಮೇರೆಗೆ ಕೊನೆಯ ಹಂತದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪನವರನ್ನು ಚುನಾವಣೆಗೆ ನಿಲ್ಲಿಸಲಾಯಿತು. ಮೈತ್ರಿ ಪಕ್ಷಗಳ ನಾಯಕರ ಸೂಚನೆಯಂತೆ ವಿದೇಶದಲ್ಲಿದ್ದ ಮಧುಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಕಡಿಮೆ ಅಂತರದಿಂದ ಸೋತರು. ಒಂದು ವೇಳೆ ನಾವು ಚುನಾವಣೆಗೆ ಸರಿಯಾದ ಸಿದ್ದತೆಗಳನ್ನು ಮಾಡಿಕೊಂಡಿದ್ದರೆ, ಮಧುಬಂಗಾರಪ್ಪ ಗೆಲುವಿನ ಕಿರೀಟ ಧರಿಸುತ್ತಿದ್ದರು. ಮತದಾನ ಮಾಡಿದ ಶಿವಮೊಗ್ಗ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಕಾಂಗ್ರೆಸ್ ನಾಯಕರಿಗೆ ಅಭಿನಂದನೆ:
ಈ ಚುನಾವಣೆಗೆ ಶ್ರಮಿಸಿದ ಕಾಂಗ್ರೆಸ್ ಹಿರಿಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿಕೆಶಿ ಹಾಗೂ ಜೆಡಿಎಸ್ ನಾಯಕರಿಗೆ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತೇನೆ. ರಾಮನಗರದಲ್ಲಿ ಡಿಕೆಶಿ, ಡಿಕೆ ಸುರೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ಗೆಲುವು ಆಗಿದೆ. ಮುಂದಿನ ವಾರ ದೆಹಲಿಗೆ ಹೋಗಿ ಕಾಂಗ್ರೆಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೈತ್ರಿ ಗೆಲುವು ಬಿಜೆಪಿಗೆ ತಕ್ಕ ಉತ್ತರ:
ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ – ಜೆಡಿಎಸ್ ಅಭ್ಯರ್ಥಿಗಳ ಗೆಲುವು ಬಿಜೆಪಿಗೆ ತಕ್ಕ ಉತ್ತರವಾಗಿದೆ. ಮೈತ್ರಿ ಸರ್ಕಾರ ರಚನೆ ಆದ ಬಳಿಕ ಸರ್ಕಾರದ ವಿರುದ್ದ ಟೀಕೆ ಟಿಪ್ಪಣಿ ಮಾಡಿದ ಬಿಜೆಪಿ ನಾಯಕರಿಗೆ ಇದೊಂದು ತಕ್ಕ ಉತ್ತರ ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಗೆ ಮೈತ್ರಿ ಖಚಿತ:
ಈ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೂ ಇದೆ ರೀತಿಯ ಮೈತ್ರಿ ಮೂಲಕ ಚುನಾವಣೆ ಎದುರಿಸುತ್ತೇವೆ. 28 ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ನಾವು ಆ ಗುರಿ ತಲುಪುತ್ತೇವೆ. ಮುಂದಿನ ಲೋಕಸಭೆ ಚುನಾವಣೆಗೆ ಮೈತ್ರಿ ಬಗ್ಗೆ ಆಗಲೇ ತೀರ್ಮಾನಿಸಿದ್ದೇವೆ. ಎರಡೂ ಪಕ್ಷದ ನಾಯಕರು ಚರ್ಚಿಸಿ ಸೀಟು ಹಂಚಿಕೆ ಮಾಡುತ್ತಾರೆ. 28 ಸ್ಥಾನ ಗೆಲ್ಲುವುದು ನಮ್ಮ ಗುರಿ ಎಂದರು.
ಎರಡು ಲೋಕಸಭೆ ಕ್ಷೇತ್ರದಲ್ಲಿ ಗೆದ್ದಿಬಿಟ್ಟಿದ್ದೀವಿ ಎಂದು ಮೈ ಮರೆಯುವುದಿಲ್ಲ. ಜನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಜವಾಬ್ದಾರಿಯಿಂದ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ. ಇನ್ನಷ್ಟು ಜನಪರ ಯೋಜನೆ ತರುತ್ತೇವೆ ಎಂದು ಹೇಳಿದರು.
Comments are closed.