
ಬೆಂಗಳೂರು: ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಒಂದೆಡೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಐದೂ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದರೆ, ಬಿಜೆಪಿ ಏಕಾಂಗಿ ಹೋರಾಟ ಮಾಡುತ್ತಿದೆ. ಕಾಂಗ್ರೆಸ್ – ಜೆಡಿಎಸ್ ಜಂಟಿ ಅಭ್ಯರ್ಥಿಗಳ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎರಡೂ ಪಕ್ಷದ ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಆರ್. ಅಶೋಕ್, ಸದಾನಂದ ಗೌಡ ಸೇರಿದಂತೆ ಹಲವು ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ.
ನಾಳೆ ನಡೆಯಲಿರುವ ಮತದಾನದಲ್ಲಿ ಮತದಾರ ಯಾರಿಗೆ ಮತ ಹಾಕುತ್ತಾನೆ ಎಂಬುದರ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿಂತಿದೆ. ಅದಕ್ಕೂ ಮಿಗಿಲಾಗಿ ಈ ಚುನಾವಣೆ ಮುಂಬರುವ 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸೆಮಿ ಫೈನಲ್ ಎಂದೇ ಬಿಂಬಿತವಾಗಿದೆ. ಹೀಗಾಗಿ ಮೂರೂ ಪಕ್ಷಗಳಿಗೂ ತಮ್ಮ ಶಕ್ತಿಯನ್ನು ತೂಕಕ್ಕೆ ಹಾಕುವ ಸಮಯ ಇದು ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ – ಜೆಡಿಎಸ್ ಜಂಟಿ ಅಭ್ಯರ್ಥಿಗಳು ಸೋತರೇನು?:
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಉಪಚುನಾವಣೆಯ ಫಲಿತಾಂಶದಿಂದ ಗಟ್ಟಿಯಾಗಬಹುದು ಅಥವಾ ಮೈತ್ರಿ ಮುರಿದು ಬೀಳಬಹುದು. ಒಂದು ವೇಳೆ ಐದು ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಬಿಜೆಪಿ ಪಕ್ಷ ಗೆದ್ದರೆ, ಮೈತ್ರಿಯ ವಿರುದ್ಧ ಜನಾಭಿಪ್ರಾಯವಿದೆ, ಇದರಿಂದ ಲೋಕ ಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಮೈತ್ರಿಯನ್ನು ಮುರಿಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಈ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕಾರಣಕ್ಕಾಗಿಯೇ ಪಕ್ಷದ ನಾಯಕರ ದೊಡ್ಡ ದಂಡನ್ನೇ ಪ್ರಚಾರಕ್ಕೆ ಇಳಿಸಿತ್ತು. ಜಮಖಂಡಿಯಲ್ಲಿ ಮೃತ ಶಾಸಕ ಸಿದ್ದು ನ್ಯಾಮಗೌಡ ಮಗ ಆನಂದ್ ನ್ಯಾಮಗೌಡ ಗೆಲುವು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಗೆದ್ದ ಖುಷಿಯಲ್ಲಿದೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್. ಚಂದ್ರಶೇಖರ್ ಯುಟರ್ನ್ ಹೊಡೆದು ಕಾಂಗ್ರೆಸ್ಗೆ ಮರಳಿದ್ದಾರೆ. ಇದರಿಂದ ರಾಮನಗರದಲ್ಲಿ ಒಂದರ್ಥದಲ್ಲಿ ಅನಿತಾ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಅವಿರೋಧ ಆಯ್ಕೆಯಾದರೂ ಜನ ಮತದಾನ ಮಾಡಬೇಕಲ್ಲ ಎಂಬುದೇ ರಾಮನಗರ ಉಪಚುನಾವಣೆಯ ಒಟ್ಟಾರೆ ಸಾರಾಂಶ.
ರಾಮನಗರ, ಜಮಖಂಡಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಮಂಡ್ಯದಲ್ಲೂ ಕಾಂಗ್ರೆಸ್ – ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಶಿವರಾಮೇಗೌಡರನ್ನು ಕಣಕ್ಕಿಳಿಸಲಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ನ ಭದ್ರಕೋಟೆಯಂತಿರುವ ಮಂಡ್ಯದಲ್ಲೂ ಮೈತ್ರಿ ಪಕ್ಷ ಜಯ ಸಾಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪೈಪೋಟಿ ನೀಡುವುದೇ ಅನುಮಾನ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.
ಬಳ್ಳಾರಿ, ಶಿವಮೊಗ್ಗದಲ್ಲಿ ಭಾರೀ ಸ್ಪರ್ಧೆ:
ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಹೊಂದಿದ್ದರೆ, ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಜೆ. ಶಾಂತ ಮತ್ತು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿ.ಎಸ್. ಉಗ್ರಪ್ಪ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸಲೇ ಬೇಕು ಎಂಬ ಹಠತೊಟ್ಟು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ ಮಾಡಿದ್ದರು.
ಅದಕ್ಕೆ ಉತ್ತರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀರಾಮುಲು ಬಳ್ಳಾರಿಯಲ್ಲಿ ಕಾಂಗ್ರೆಸ್ಗೆ ನೆಲೆಯಿಲ್ಲ ಎಂಬುದನ್ನು ನಿರೂಪಿಸಲು ಹಠ ತೊಟ್ಟು ಪ್ರಚಾರ ಮಾಡಿದ್ದಾರೆ. ಆದರೆ ಮೇಲ್ನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ಬಿಜೆಪಿ ತೆಕ್ಕೆಗೆ ಬಳ್ಳಾರಿ ಬೀಳುವ ಸಾಧ್ಯತೆಯಿಲ್ಲ. ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವುದಂತೂ ಸ್ಪಷ್ಟ.
ಶಿವಮೊಗ್ಗದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಚುನಾವಣಾ ಕಣಕ್ಕಿಳಿದಿದ್ದಾರೆ. ಯಡಿಯೂಪ್ಪ ಮಗ ಬಿ.ವೈ. ರಾಘವೇಂದ್ರ, ದಿವಂಗತ ಬಂಗಾರಪ್ಪ ಮಗ ಮಧು ಬಂಗಾರಪ್ಪ ಮತ್ತು ಜೆ.ಎಚ್. ಪಟೇಲ್ ಮಗ ಮಹಿಮಾ ಪಟೇಲ್ ಕಣಕ್ಕಿಳಿದಿದ್ದಾರೆ. ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ಮೇಲ್ನೋಟಕ್ಕೆ ಕಾಣುತ್ತಿದೆ. ಈಡಿಗ ಸಮುದಾಯ ಮತ್ತು ಒಕ್ಕಲಿಗ ಸಮುದಾಯದ ಮತಗಳೇನಾದರೂ ಕ್ರೋಢೀಕರಣವಾದಲ್ಲಿ ಬಿ.ವೈ. ರಾಘವೇಂದ್ರ ಅವರಿಗೆ ಮಧು ಬಂಗಾರಪ್ಪ ಬಿಸಿ ತುಪ್ಪವಾಗಬಹುದು. ಆದರೆ ಯಡಿಯೂರಪ್ಪ ಅವರ ಕ್ಷೇತ್ರ ಮತ್ತು ಅವರ ವರ್ಚಸ್ಸು ರಾಘವೇಂದ್ರ ಅವರಿಗೆ ಸಹಕಾರಿಯಾಗುವ ಸಾಧ್ಯತೆಯಿದೆ.
ಒಂದು ವೇಳೆ ಈಗಿನ ಲೆಕ್ಕಾಚಾರದಂತೆ ಫಲಿತಾಂಶ ಹೊರಬಿದ್ದರೆ ಯಡಿಯೂರಪ್ಪ ಅವರು ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ. ಜತೆಗೆ ಬಿಜೆಪಿ ಕೂಡ ಮುಂಬರುವ ಲೋಕಸಭಾ ಚುನಾವಣೆಗೆ ಹೊಸ ಯೋಜನೆ ರೂಪಿಸುವ ಅನಿವಾರ್ಯತೆ ಬೀಳಲಿದೆ. ಜತೆಗೆ ಸಮ್ಮಿಶ್ರ ಸರ್ಕಾರ ಇನ್ನಷ್ಟು ಸದೃಢವಾಗಲಿದ್ದು 2019ರ ಲೋಕಸಭೆ ಚುನಾವಣೆಗೆ ಮೈತ್ರಿ ಅಭ್ಯರ್ಥಿಗಳ ಪಟ್ಟಿಯನ್ನು ಈಗಿಂದಲೇ ಮಾಡಲು ಶುರುವಿಟ್ಟರೂ ಆಶ್ಚರ್ಯವಿಲ್ಲ.
Comments are closed.