ಕರ್ನಾಟಕ

ಚಿನ್ನದ ವ್ಯಾಪಾರಿಗಳ ಗುರಿ ಮಾಡುತ್ತಿದ್ದ ನಕಲಿ ಪೊಲೀಸ್ ಗ್ಯಾಂಗ್!

Pinterest LinkedIn Tumblr


ಚಿಕ್ಕಬಳ್ಳಾಪುರ: ಚಿನ್ನದ ವ್ಯಾಪಾರಿಯನ್ನ ಅಪಹರಣ ಮಾಡಿ ಅವರ ಬಳಿ ಇದ್ದ ಹಣ ಸುಲಿಗೆ ಮಾಡಿದ್ದ ನಕಲಿ ಪೊಲೀಸರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ ಮಣಿ (45), ಸಂಪಂಗಿರಾಮ್(38), ಶ್ರೀನಿವಾಸ್(48), ರಾಮಾಂಜಿನೇಯ ರೆಡ್ಡಿ(28), ಸುರೇಶ್(42), ಆರ್ ಸೋಮು (52), ಜಿ ವೇಣುಗೋಪಾಲ್(40) ಬಂಧಿತರು. ಬಂಧಿತರಿಂದ 9 ಎಂಎಂ ನ ಪಿಸ್ತೂಲು, 10 ಜೀವಂತ ಗುಂಡುಗಳು ಹಾಗೂ 25 ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಪ್ರಕರಣ: ಮೂಲತಃ ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಧರಣಿಧರನ್ ಎಂಬವರಿಗೆ ಕರೆ ಮಾಡಿದ್ದ ಆರೋಪಿಗಳು ತಮ್ಮ ಬಳಿ ಚಿನ್ನದ ಬಿಸ್ಕೆಟ್ ಇವೆ. ಮಾರಾಟ ಮಾಡುತ್ತೇವೆ ಎಂದು ದೇವನಹಳ್ಳಿಗೆ ಕರೆಸಿಕೊಂಡಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ದೇವನಹಳ್ಳಿ ಬಂದ ಧರಣಿಧರನ್ ಅವರನ್ನು ಸೆ. 19 ರಂದು ದೇವನಹಳ್ಳಿಯ ರೈಲ್ವೇ ಟ್ರ್ಯಾಕ್ ಬಳಿ ಅಪಹರಣ ಮಾಡಿ, ಅವರ ಬಳಿ ಇದ್ದ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು. ಅಚ್ಚರಿ ಅಂದರೆ ಆರೋಪಿಗಳು ಪೊಲೀಸ್ ವಾಹನ ಮಾದರಿಯ ಬೊಲೇರೊ ಜೀಪ್ ಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಚಿನ್ನದ ವ್ಯಾಪಾರಿ ಧರಣಿಧರನ್ ರನ್ನು ಅಪಹರಣ ಮಾಡಿದ್ದರು.

ಈ ಕುರಿತು ಧರಣಿಧರನ್ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಸಹ ಇದೇ ಮಾದರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಕೃತ್ಯದ ಬಗ್ಗೆ ಅನುಮಾನಗೊಂಡು ಹಳೆಯ ಗ್ಯಾಂಗ್ ಬಗ್ಗೆ ತನಿಖೆ ನಡೆಸಿದ ವೇಳೆ ಏಳು ಮಂದಿ ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್: ಹಣಕ್ಕಾಗಿ ಚಿನ್ನದ ವ್ಯಾಪಾರಿಗಳನ್ನು ಕಿಡ್ನಾಪ್ ಮಾಡಿ ಹಣ ದರೋಡೆ ಮಾಡುವುದೇ ಇವರ ಕೆಲಸವಾಗಿತ್ತು. ಅದೇ ರೀತಿ ಧರಣಿಧರನ್ ಅವರಿಗೂ ಫೋನ್ ಮಾಡಿದ ಆರೋಪಿಗಳು ಮೊದಲು ಅಸಲಿ ಚಿನ್ನದ ನಾಣ್ಯವನ್ನು ತೋರಿಸಿ ಧರಣಿಧರ್ ಅವರನ್ನು ನಂಬಿಸಿದರು. ಬಳಿಕ ಹೆಚ್ಚಿನ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ಪೊಲೀಸ್ ವೇಷದಲ್ಲಿ ಅಪಹರಣ ಮಾಡಿದ್ದರು.

ಅಪಹರಣ ಮಾಡಿದ ಬಳಿಕ ಧರಣಿಧರ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಬಳಿಕ ಪೊಲೀಸ್ ಬೋರ್ಡ್ ಇರುವ ಬುಲೆರೋ ವಾಹನದಲ್ಲಿ ವಿಜಯಪುರ ರಸ್ತೆಯಲ್ಲಿ ಧರಣಿದರನ್ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿದ್ದು, ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿರುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

Comments are closed.