ಕರ್ನಾಟಕ

ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಬಿರುಕಿನ ಮುನ್ಸೂಚನೆ; ದಸರಾ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್​ ಜನಪ್ರತಿನಿಧಿಗಳು

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಎರಡೂ ಪಕ್ಷಗಳಲ್ಲಿ ಸಮನ್ವಯತೆ ಇಂದಿಗೂ ಸಾಧ್ಯವಾಗಿಲ್ಲ ಎಂಬುದಕ್ಕೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ನಾಡಿನ ವೈಭವ ಸಾರುವ, ಸರ್ಕಾರದಿಂದಲೇ ಆಚರಿಸುವ ದಸರಾ ಸಂಭ್ರಮ ಉದ್ಘಾಟನೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​ ಸೇರಿದಂತೆ ಕಾಂಗ್ರೆಸ್​ನ ಯಾವೊಬ್ಬ ಜನಪ್ರತಿನಿಧಿಗಳು ಹಾಜರಾಗದೆ, ದೂರವೇ ಉಳಿದಿದ್ದಾರೆ.

ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿದ್ದರೂ ತಮ್ಮನ್ನ ನಿರ್ಲಕ್ಷಿಸಲಾಗುತ್ತಿದೆ. ಮೈಸೂರು ದಸರಾ ಉತ್ಸವದ ಸಿದ್ದತಾ ಸಭೆಗಳಿಗೂ ತಮ್ಮನ್ನು ಆಹ್ವಾನಿಸಿಲ್ಲ. ಸರ್ಕಾರದ ಮಟ್ಟದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ವರ್ಗಾವಣೆ ವಿಚಾರ ಸೇರಿ ಯಾವುದೇ ವಿಚಾರಕ್ಕೂ ತಮ್ಮ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲ ಎಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದಸರಾ ಉದ್ಘಾಟನೆಗೆ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಡಹಬ್ಬ ಉದ್ಘಾಟನೆ ಕಾರ್ಯಕ್ರಮ ಇದ್ದರೂ ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿ ಬೇರೊಂದು ಕಾರ್ಯಕ್ರಮದಲ್ಲಿ ಪರಮೇಶ್ವರ್​ ಅತಿಥಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಳೆದ ಬಾರಿ ದಸರೆಯನ್ನು ಮುಖ್ಯಮಂತ್ರಿಯಾಗಿದ್ದ, ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಆಗ ಸಚಿವರಾಗಿದ್ದ ಎಚ್​.ಎಸ್​.ಮಹದೇವಪ್ರಸಾದ್, ಎಚ್​.ಸಿ.ಮಹದೇವಪ್ಪ, ತನ್ವೀರ್ ಸೇಠ್ ಸೇರಿ ಶಾಸಕರಾದ ಸೋಮಶೇಖರ್, ವಾಸು ಮುಂತಾದ ಕಾಂಗ್ರೆಸ್ ಜನಪ್ರತಿನಿಧಿಗಳ ದಂಡೇ ದಸರಾ ಉದ್ಘಾಟನೆಯಲ್ಲಿ ನೆರೆದಿದ್ದರು. ಆದರೆ, ಈ ಬಾರಿ ಯಾವೊಬ್ಬ ಕಾಂಗ್ರೆಸ್​ ಜನಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮದ ಹತ್ತಿರ ಸುಳಿದಿಲ್ಲ. ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರು ಮೈಸೂರು ಭಾಗದ ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇನ್ನು ವರುಣಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಯತೀಂದ್ರ ಸಿದ್ದರಾಮಯ್ಯ , ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಹಾಗೂ ಎಚ್​.ಡಿ.ಕೋಟೆದ ಅನಿಲ್ ಚಿಕ್ಕಮಾದು ಅವರು ಕೂಡ ದಸರಾ ಉದ್ಘಾಟನೆ ಕಾರ್ಯಕ್ರಮದಿಂದ ದೂರವೇ. ಅಲ್ಲದೇ, ದೋಸ್ತಿ ಸರ್ಕಾರದ ಕಾಂಗ್ರೆಸ್​ ಸಚಿವರುಗಳೂ ಕೂಡ ಈ ಕಾರ್ಯಕ್ರಮದಿಂದ ದೂವೇ ಉಳಿದಿದ್ದಾರೆ.

ಇದನ್ನು ನೋಡಿದರೆ, ಮೈತ್ರಿ ಸರ್ಕಾರದಲ್ಲಿ ಅಸಮಾಧಾನದ ಬೂದಿ ಮುಚ್ಚಿದ ಕೆಂಡದಂತೆ ಇರುವುದು ಸ್ಪಷ್ಟವಾಗಿದೆ. ಅದು ಯಾವ ಸಮಯದಲ್ಲಿ ಬೇಕಾದರೂ ಸ್ಪೋಟಗೊಳ್ಳುವ ಮುನ್ಸೂಚೆನಯನ್ನು ಈ ದಸರಾ ಉದ್ಘಾಟನೆ ಕಾರ್ಯಕ್ರಮ ನೀಡಿದೆ.

Comments are closed.