ಕರ್ನಾಟಕ

ಸಿ ವೋಟರ್ ಸಮೀಕ್ಷೆ: ರಾಜ್ಯದಲ್ಲಿ ಬಿಜೆಪಿ ಮೇಲುಗೈ? ಕೇಂದ್ರದಲ್ಲಿ ಎನ್​ಡಿಎ ಮತ್ತೆ ಅಧಿಕಾರಕ್ಕೆ?

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇದೆ. ಕೇಂದ್ರ ಹಾಗೂ ವಿಪಕ್ಷಗಳ ನಡುವೆ ಈಗಾಗಲೇ ಜಿದ್ದಾಜಿದ್ದಿ ತಾರಕಕ್ಕೇರುತ್ತಿದೆ. ಜನರಿಗೆ ಕೊಟ್ಟ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಎಂದು ಕಾಂಗ್ರೆಸ್ ಮತ್ತಿತರರ ವಿಪಕ್ಷಗಳು ಹರಿಹಾಯುತ್ತಿವೆ. ಹಿಂದಿನ ಸರಕಾರ ಮಾಡಿದ ಪಾಪಕರ್ಮಗಳನ್ನ ತೊಳೆದು ಹೊಸ ಮನ್ವಂತರ ಶುರು ಮಾಡಿದ್ದೇವೆಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆ. ಈ ನಡುವೆ ಮುಂದಿನ ಬಾರಿ ಜನರು ಯಾರಿಗೆ ಗದ್ದುಗೆ ಕೊಡುತ್ತಾರೆ ಎಂಬ ಲೆಕ್ಕಾಚಾರ ದಿನನಿತ್ಯ ನಡೆಯುತ್ತಲೇ ಇದೆ. ದೇಶದ ಅಗ್ರಗಣ್ಯ ಸಮೀಕ್ಷೆ ಸಂಸ್ಥೆಗಳ ಪೈಕಿ ಒಂದಾದ ಸಿವೋಟರ್​ನ ಸಮೀಕ್ಷೆಯ ಪ್ರಕಾರ ಈಗ ಲೋಕಸಭೆ ಚುನಾವಣೆ ನಡೆದರೆ ಎನ್​ಡಿಎ ಮೈತ್ರಿಕೂಟವೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಆದರೆ, ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳು ದಕ್ಕುತ್ತವೆ. ತೀರಾ ಅಲ್ಪ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕದಲ್ಲಿ 2014ರಲ್ಲಿ 17 ಸಂಸದರನ್ನು ಕಂಡಿದ್ದ ಬಿಜೆಪಿ ಈ ಬಾರಿ ಅದಕ್ಕಿಂತಲೂ ಸ್ವಲ್ಪ ಹೆಚ್ಚು ಗೆಲುವು ಕಾಣಬಹುದೆಂಬ ಸೂಚನೆಯನ್ನು ಈ ಸಮೀಕ್ಷೆ ನೀಡಿದೆ.

2019ರಲ್ಲಿ ಯಾರು ಗೆಲ್ಲಬಹುದು?

ಒಟ್ಟು ಸ್ಥಾನಗಳು: 543
ಬಹುಮತಕ್ಕೆ: 272
ಎನ್​ಡಿಎ: 276
ಯುಪಿಎ: 112
ಇತರರು: 155

ಶೇಕಡಾವಾರು ಲೆಕ್ಕಾಚಾರ:
ಎನ್​ಡಿಎ: 38%
ಯುಪಿಎ: 25%
ಇತರರು: 37%

ಆದರೆ, ಇದು ಈಗಿರುವ ಮೈತ್ರಿಕೂಟ ವ್ಯವಸ್ಥೆಯಲ್ಲೇ ಚುನಾವಣೆಗೆ ಸ್ಪರ್ಧಿಸಿದರೆ ಸಿಗಬಹುದಾದ ಫಲಿತಾಂಶವಾಗಿದೆ. ಒಂದು ವೇಳೆ, ಕಾಂಗ್ರೆಸ್ ಉದ್ದೇಶಿಸಿರುವಂತೆ ಮಹಾಮೈತ್ರಿಕೂಟ ರಚನೆಯಾದರೆ ಎನ್​ಡಿಎಗೆ ಅಧಿಕಾರ ಹಿಡಿಯುವ ಸಾಧ್ಯತೆ ಕ್ಷೀಣಿಸುತ್ತದಂತೆ. ಉತ್ತರ ಪ್ರದೇಶದಲ್ಲಿ ಬಹುತೇಕ ಸ್ವೀಪ್ ಮಾಡಿದ್ದ ಬಿಜೆಪಿಯ ವಿರುದ್ಧ ಎಸ್​ಪಿ-ಬಿಎಸ್​ಪಿ ಒಂದಾದರೆ ಬಹಳಷ್ಟು ಸೀಟುಗಳನ್ನ ಗೆಲ್ಲಲು ಸಾಧ್ಯವಿದೆ ಎನ್ನುತ್ತದೆ ಸಿವೋಟರ್ ಸಮೀಕ್ಷೆ. ಅಂಥ ಸಂದರ್ಭದಲ್ಲಿ ಬಿಜೆಪಿಗೆ ದಕ್ಕುವುದು ಗರಿಷ್ಠ 24 ಸ್ಥಾನ ಮಾತ್ರವಾಗುತ್ತದೆಯಂತೆ.

ಕರ್ನಾಟಕದಲ್ಲಿ ಹೇಗೆ?
ಸಮೀಕ್ಷೆಯಲ್ಲಿ ಕರ್ನಾಟಕವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿಲ್ಲ. ಒಟ್ಟಾರೆ ದಕ್ಷಿಣ ಭಾರತದಲ್ಲಿ ಎನ್​ಡಿಎ 21 ಸ್ಥಾನಗಳನ್ನ ಗೆಲ್ಲಬಹುದೆಂದು ತಿಳಿಸಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದೆಡೆ ಎನ್​ಡಿಎ ಪ್ರಬಲವಾಗಿಯೇನೂ ಇಲ್ಲ. ತಮಿಳುನಾಡಿನಲ್ಲಿ ಪಾಟ್ಟಾಳ್ ಮಕ್ಕಳ್ ಕಚ್ಚಿ ಕಳೆದ ಬಾರಿ ಒಂದು ಕ್ಷೇತ್ರ ಜಯಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ ಕಳೆದ ಬಾರಿ 17 ಸ್ಥಾನಗಳನ್ನ ಗೆದ್ದಿತ್ತು. ಆಂಧ್ರ, ಕೇರಳದಲ್ಲೂ ಬಿಜೆಪಿಗೆ ಗೆಲುವು ಕಷ್ಟಕರವೇ. ಹೀಗಾಗಿ, ದಕ್ಷಿಣ ಭಾರತದಲ್ಲಿ ಎನ್​ಡಿಎಗೆ 21 ಸ್ಥಾನ ಬರುತ್ತದೆಂದರೆ, ಬಹುತೇಕವು ಕರ್ನಾಟಕದಿಂದಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಿವೋಟರ್ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 18-20 ಸ್ಥಾನಗಳನ್ನ ಗೆಲ್ಲಬಹುದೆಂದು ಅಂದಾಜಿಸಬಹುದು.

ದಕ್ಷಿಣ ಭಾರತ (ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ)
ಎನ್​ಡಿಎ: 21
ಯುಪಿಎ: 32
ಇತರರು: 76

ಮಹಾರಾಷ್ಟ್ರದಲ್ಲಿ ವಿಚಿತ್ರ ಸ್ಥಿತಿ:
ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಶಿವಸೇನೆ ಕತ್ತಿಮಸಿಯುತ್ತಾ ನಿಂತಿದೆ. ಒಂದು ವೇಳೆ, ಈ ಎರಡೂ ಸಾಂಪ್ರದಾಯಿಕ ಮಿತ್ರರು ಚುನಾವಣೆಯಲ್ಲೂ ಕತ್ತಿ ಮಸೆದರೆ ಲಾಭವಾಗುವುದು ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳಿಗೆಯೇ. ಬಿಜೆಪಿ, ಶಿವಸೇನೆ ಚುನಾವಣೆಪೂರ್ವ ಮೈತ್ರಿ ಮಾಡಿಕೊಂಡರೆ ಸ್ವೀಪ್ ಮಾಡುವ ಸಾಧ್ಯತೆ ಇರುತ್ತದೆ. ಇಲ್ಲವಾದರೆ ತಿರುಗುಬಾಣವಾಗುತ್ತದೆ ಎಂದು ಸಿವೋಟರ್ ಸಮೀಕ್ಷೆ ಸೂಚಿಸಿದೆ.

ಹಾಗೆಯೇ, ಬಿಹಾರದಲ್ಲಿ ಎನ್​ಡಿಎ ಮೈತ್ರಿಕೂಟ ಛಿದ್ರಗೊಂಡು ಎಲ್​ಜೆಪಿ, ಆರ್​ಎಸ್​ಎಲ್​ಪಿ ಪಕ್ಷಗಳು ಯುಪಿಎ ಕೂಟ ಸೇರಿಕೊಂಡರೆ ಮೋದಿಗೆ ಭಾರೀ ನಷ್ಟವಾಗುತ್ತದೆ.

ಇನ್ನು, ದೆಹಲಿಯ ಎಲ್ಲಾ 7 ಕ್ಷೇತ್ರಗಳೂ ಕಳೆದ ಬಾರಿಯಂತೆ ಬಿಜೆಪಿಯೇ ಸ್ವೀಪ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಎನ್​ಡಿಎಗೆ ಹೆಚ್ಚು ಸ್ಥಾನಗಳು ಸಿಗಲಿದೆ. ಹರಿಯಾಣ, ಒಡಿಶಾ, ಛತ್ತೀಸ್​ಗಡ, ಮಧ್ಯಪ್ರದೇಶ ರಾಜ್ಯಗಳಲ್ಲಿ ಎನ್​ಡಿಎಗೆ ಶುಭ ಸುದ್ದಿ ಇದೆ.

ಒಟ್ಟಾರೆಯಾಗಿ, ಸದ್ಯದ ಮೂಡ್​ನಲ್ಲಿ ಎನ್​ಡಿಎ ಮೈತ್ರಿಕೂಟ ಸರಳ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಬಹುದು. ಒಂದು ವೇಳೆ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಎಚ್ಚೆತ್ತುಕೊಂಡು ಮಹಾಮೈತ್ರಿ ರಚಿಸಿದರೆ ಅಧಿಕಾರ ಹಿಡಿಯಬಹುದು. ವಿಪಕ್ಷಗಲಿಗೆ ಆಂತರಿಕ ಕಚ್ಚಾಟ, ಪ್ರತಿಷ್ಠೆಯೇ ಹೆಚ್ಚಾಗಿಬಿಟ್ಟರೆ ಕೇಂದ್ರದಲ್ಲಿ ಮೋದಿಯೇ ಮತ್ತೆ ಕಿಂಗ್ ಆಗಬಹುದು.

Comments are closed.