ಕರ್ನಾಟಕ

ಕರ್ನಾಟಕದಲ್ಲಿ ತೈಲ ಬೆಲೆ 2.50 ರೂ. ಇಳಿಕೆ?

Pinterest LinkedIn Tumblr


ಬೆಂಗಳೂರು: ಹೆಚ್ಚುತ್ತಿರುವ ತೈಲ ದರ ಏರಿಕೆಯಿಂದ ರಾಜ್ಯದ ಜನರಿಗೆ ಸ್ವಲ್ಪ ನಿರಾಳತೆ ನೀಡಲು ಸರಕಾರ ನಿರ್ಧರಿಸಿದ್ದು, ಪೆಟ್ರೋಲ್‌-ಡೀಸೆಲ್‌ ದರ 2ರಿಂದ 2.50 ರೂ. ಇಳಿಯುವ ಸಾಧ್ಯತೆ ಇದೆ. ಸೋಮವಾರ ಅಧಿಕೃತ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.

ಸಿಎಂ ಕುಮಾರಸ್ವಾಮಿ ಅವರು ಕಳೆದ ವಾರವೇ ರಾಜ್ಯದಲ್ಲಿ ಮಾರಾಟ ತೆರಿಗೆ ಇಳಿಸುವ ಸೂಚನೆ ನೀಡಿದ್ದರು. ರಾಜ್ಯದ ಹಣಕಾಸು ಪರಿಸ್ಥಿತಿಗೆ ತೊಂದರೆಯಾಗದ ರೀತಿಯಲ್ಲಿ ಇಂಧನ ಬೆಲೆ ಇಳಿಕೆ ಮಾಡುವ ಬಗ್ಗೆ ಪ್ರಸ್ತಾಪ ಸಿದ್ಧಪಡಿಸುವಂತೆ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಅಧಿಕಾರಿಗಳು ಸೋಮವಾರ ವರದಿ ನೀಡಿದ ತಕ್ಷಣ ಅಧಿಕೃತ ಘೋಷಣೆ ಹೊರಬೀಳಲಿದೆ.

ಕೇಂದ್ರಕ್ಕೆ ತಿರುಗೇಟು?
ಪೆಟ್ರೋಲ್‌ ಹಾಗೂ ಡೀಸೆಲ್‌ ದರ ದಿನೇದಿನೆ ಗಗನಕ್ಕೆ ಏರುತ್ತಿದ್ದರೂ ಸಾಮಾಜಿಕ ಜಾಲ ತಾಣಗಳಲ್ಲಿ ಮಾತ್ರ ರಾಜ್ಯ ಸರಕಾರ ವಿಧಿಸಿರುವ ಹೆಚ್ಚುವರಿ ಸೆಸ್‌ನ ದೆಸೆಯಿಂದಾಗಿಯೇ ಕರ್ನಾಟಕದಲ್ಲಿ ತೈಲ ಬೆಲೆಗಳು ಕೈ ಸುಡುವಂತಾಗಿದೆ ಎಂದು ಆಪಾದಿಸಲಾಗುತ್ತಿದೆ.

ಈ ಬಗ್ಗೆ ವ್ಯವಸ್ಥಿತ ಪ್ರಚಾರ ನಡೆಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕೇಂದ್ರ ಸರಕಾರಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಕುಮಾರಸ್ವಾಮಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯದಲ್ಲಿ ಮೈತ್ರಿ ಸರಕಾರದ ವಿರುದ್ಧ ಯಾವುದೇ ಅಸ್ತ್ರ ಇಲ್ಲದಂತೆ ಮಾಡುವ ಲೆಕ್ಕಾಚಾರವೂ ಅಡಗಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ತೈಲೋತ್ಪನ್ನಗಳ ಮೇಲೆ ವಿಧಿಸಿದ್ದ ಹೆಚ್ಚುವರಿ ಸೆಸ್‌ ಕಡಿತ ಮಾಡುವಂತೆ ಬಜೆಟ್‌ ಮಂಡನೆಯಾದ ಬಳಿಕ ಪತ್ರ ಬರೆದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಸಣ್ಣ ಟಾಂಗ್‌ ನೀಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಮುಖ್ಯಮಂತ್ರಿಯ ವಿವೇಚನಾಧಿಕಾರ ಇನ್ನೊಬ್ಬರ ಆಗ್ರಹಕ್ಕೆ ಬಳಸುವಂತದ್ದಲ್ಲ ಎಂಬ ಸಂದೇಶ ರವಾನೆಯೂ ಇದರ ಹಿಂದಿದೆ ಎಂದು ತಿಳಿದು ಬಂದಿದೆ.

ಕರ ಸಂಗ್ರಹದಲ್ಲಿ ಸಾಧನೆ
ಈ ಎಲ್ಲ ರಾಜಕೀಯ ಕಾರಣಗಳನ್ನು ಹೊರತುಪಡಿಸಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರದ ಮೊದಲ ತ್ರೈಮಾಸಿಕದ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಹಣಕಾಸು, ಅಬಕಾರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಜತೆಗೆ ನಡೆಸಿದ ಸಭೆಯಲ್ಲಿ ಈ ಮಾಹಿತಿ ಲಭಿಸಿದೆ.

ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ.20ರಷ್ಟು ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಮೇಲೆ ಬಿದ್ದಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಹೊರೆ ಇಳಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕುಮಾರಸ್ವಾಮಿ ಸೂಚಿಸಿದ್ದಾರೆ. ಸರಕಾರದ ಮೂಲಗಳ ಪ್ರಕಾರ ಕನಿಷ್ಠ 2 ರಿಂದ 2.50 ರೂ.ವರೆಗೆ ಬೆಲೆ ಇಳಿಕೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿದೆ.

ದಾಟಿತು 90 ರೂ. ಗಡಿ!
ಭಾನುವಾರವೂ ಪೆಟ್ರೋಲ್‌ ದರ ಏರಿಕೆಯಾಗಿದ್ದು, ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಆಗಲೇ ಅದು 91.40 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ ಭಾನುವಾರದ ಪೆಟ್ರೋಲ್‌ ದರ 84.39 ರೂ, ಡೀಸೆಲ್‌ಗೆ 75.91 ರೂ.

ದರ ಇಳಿಸಿದ ರಾಜ್ಯಗಳು
ರಾಜಸ್ಥಾನ 2 ರೂ.
ಆಂಧ್ರ ಪ್ರದೇಶ 2 ರೂ.
ಪ.ಬಂಗಾಳ 1 ರೂ.

Comments are closed.