ಕರ್ನಾಟಕ

ಮತ್ತೆ ಸಿಎಂ ಆಗುತ್ತೇನೆಂಬ ಸಿದ್ದರಾಮಯ್ಯರ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಮತ್ತೆ ಸಿಎಂ ಆಗುತ್ತೇನೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ನೀಡಿದ್ದ ಸಾಂದರ್ಭಿಕ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಮನ್ವಯ ಸಮಿತಿ ಇರುವುದು ಒಡೆಯುವುದಕ್ಕಲ್ಲ. ಕಟ್ಟುವುದಕ್ಕೆ. ಸರ್ಕಾರ ಮತ್ತು ಮೈತ್ರಿ ಪಕ್ಷಗಳ ನಡುವೆ ಸೌಹಾರ್ತದೆ ಮೂಡಿಸುವುದಕ್ಕೆ. ಮುಂದಿನ ಐದು ವರ್ಷಗಳ ಕಾಲ ಹೆಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರಲಿದ್ದಾರೆಂದು ಹೇಳಿದ್ದಾರೆ.

ಮೈತ್ರಿ ಸರ್ಕಾರ ಸುಗಮವಾಗಿ ಸಾಗಿಸುವಲ್ಲಿ ಸಿದ್ದರಾಮಯ್ಯ ಅವರು ವಿಫಲರಾಗುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮೂಡುವ ಬಿರುಕುಗಳು ಹಾಗೂ ಬಿಕ್ಕಟ್ಟನ್ನು ಸರಿಪಡಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಇದಕ್ಕಾಗಿ ವಿಧಾನಸೌಧದಲ್ಲಿ ಅವರಿಗೆ ಕಚೇರಿಯನ್ನೂ ನೀಡಲಾಗಿದೆ. ಆದರೆ, ಸಿದ್ದರಾಮಯ್ಯ ಅವರೇ ಸ್ವತಃ ಮೈತ್ರಿ ಸರ್ಕಾರವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳುವ ಬಗ್ಗೆ ಸಿದ್ದರಾಮಯ್ಯ ಅವರು ಬೆದರಿಕೆಗಳನ್ನು ಹಾಕುತ್ತಿದ್ದರೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ಕಾರವನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸ್ಥಳೀಯ ಚುನಾವಣೆ ಅಂತಿಮಗೊಳ್ಳುವವರೆಗೂ ಶಾಂತಿಯುತವಾಗಿರುತ್ತೇವೆ. ನಂತರ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಈ ವಿಚಾರವನ್ನು ತರಲಾಗುತ್ತದೆ ಜೆಡಿಎಸ್ ನಾಯಕರು ಹೇಳಿದ್ದಾರೆ.

ಆಗಸ್ಟ್ 31ರ ಬಳಿಕ ಸ್ಥಳೀಯ ಚುನಾವಣೆ ಅಂತಿಮಗೊಂಡ ಬಳಿಕ ಈ ಕುರಿತು ದೇವೇಗೌಡ ಹಾಗೂ ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸುತ್ತೇನೆ. ನಂತರ ದೇವೇಗೌಡ ಅವರೇ ರಾಹುಲ್ ಗಾಂಧಿಯವರೊಂದಿಗೆ ಮಾತುಕತೆ ನಡೆಸುತ್ತಾರೆ, ಸಮನ್ವಯ ಸಮಿತಿಯಲ್ಲಿ ನನ್ನನ್ನು ಸೇರ್ಪಡೆಗೊಳಿಸುತ್ತಾರೆಂದು ವಿಶ್ವನಾಥ್ ಅವರು ಹೇಳಿದ್ದಾರೆ.

ಸಮನ್ನವ ಸಮಿತಿಗೆ ನನ್ನನ್ನು ಸೇರ್ಪಡೆಗೊಳಿಸುವುದಕ್ಕೆ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಜೆಡಿಎಸ್ ರಾಜ್ಯಾಧ್ಯಕ್ಷ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರೊಂದಿಗೆ ನಾನು ಕೂಡ ಸಮನ್ವಯ ಸಮಿತಿಯಲ್ಲಿರಬೇಕು. ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಿದ್ದರೂ, ಸಿದ್ದರಾಮಯ್ಯ ಅವರು ಒಪ್ಪುದ್ದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು ಪಿತೂರಿಗಳು ನಡೆಯುತ್ತಿದ್ದು, ಇದರ ಹಿಂದೆ ಯಾರಿದ್ದಾರೆಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

Comments are closed.