ಕರ್ನಾಟಕ

ನೀರವ ಮೌನದ ನಡುವೆ ಸಹಜದತ್ತ ಮರಳುತ್ತಿರುವ ಕೊಡಗು

Pinterest LinkedIn Tumblr


ಬೆಂಗಳೂರು: ನಿರಾಶ್ರಿತರ ಕೇಂದ್ರದಲ್ಲಿ ಕರಗುತ್ತಿರುವ ಸಂತ್ರಸ್ತರ ಸಂಖ್ಯೆ. ಸ್ವಂತ ನೆಲೆ, ಸಂಬಂಧಿಕರ ಮನೆಗಳತ್ತ ಮುಖ ಮಾಡುತ್ತಿರುವ ಸಂತ್ರಸ್ತರು, ವಾರದ ಬಳಿಕ ಆರಂಭವಾದ ಶಾಲಾ- ಕಾಲೇಜು. ಕೊಡಗು- ಮಂಗಳೂರಿನ ನಡುವೆ ಸಂಚಾರ ಶುರು, ತಗ್ಗಿದ ಪರಿಹಾರ ಸಾಮಗ್ರಿಗಳ ಪ್ರವಾಹ, ಮುಂದುವರಿದ ರಾಜಕಾರಣಿಗಳ ಭೇಟಿ- ಸಾಂತ್ವನ ಯಾತ್ರೆ, ನೀರವ ಮೌನದ ನಡುವೆ ಸಹಜದತ್ತ ಮರಳುವ ಹಾದಿಯಲ್ಲಿ ಕೊಡಗು…

ಅಂತೂ ಕಂಗೆಟ್ಟ ಕೊಡವರು ನಿಟ್ಟುಸಿರುಬಿಡುತ್ತಿದ್ದಾರೆ. ಮತ್ತೆ ಇಂಥ ಸಂಕಷ್ಟ ಬೇಡ ಎಂದು ಪ್ರಾರ್ಥಿಸುತ್ತಿದ್ದಾರೆ.

ದಾಖಲೆಯ ಮಳೆ, ಗುಡ್ಡ- ಭೂ ಕುಸಿತ, ಪ್ರವಾಹದಿಂದ ಕಂಗೆಟ್ಟಿದ್ದ ಕೊಡಗು ವಾರದ ಬಳಿಕ ಸಹಜತೆಯತ್ತ ಮರಳು ಕುರುಹುಗಳು ಕಾಣತೊಡಗಿವೆ. ನಿರಾಶ್ರಿತರ ಕೇಂದ್ರಗಳಲ್ಲಿ ನೆಲೆಸಿದ್ದವರು ಸಂಬಂಧಿಗಳ ಮನೆಗಳಿಗೆ ಹೊರಟಿದ್ದಾರೆ. ವಾಸ್ತವ್ಯ ಮುಂದುವರಿಸಿರುವವರು ಪರ್ಯಾಯ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅಳಿದುಳಿದ ಪೀಠೊಪಕರಣಗಳು, ಬಳಕೆಗೆ ಯೋಗ್ಯವಾದ ಗೃಯೋಪಯೋಗಿ ವಸ್ತುಗಳ ಶೋಧ, ಸಂಗ್ರಹದಲ್ಲಿ ಜನ ಸಾಮೂಹಿಕವಾಗಿ ತೊಡಗಿಸಿಕೊಂಡಿದ್ದು ಕಂಡುಬಂತು.

ವಾರದಿಂದ ಮುಚ್ಚಿದ್ದ ಶಾಲಾ- ಕಾಲೇಜುಗಳಲ್ಲಿ ಗುರುವಾರದಿಂದ ಆರಂಭವಾದವು. ತೀವ್ರ ಶಿಥಿಲಗೊಂಡಿದ್ದ 61 ಶಾಲೆಗಳನ್ನು ಹೊರತುಪಡಿಸಿದರೆ ಉಳಿದೆಡೆ ಪಾಠ ಪ್ರವಚನ ಎಂದಿನಂತೆ ಸಾಗಿತ್ತು. ಪ್ರವಾಹ, ಅನಾಹುತ, ಸಾವು- ನೋವು, ಪರಿಹಾರ ಸುದ್ದಿಗಳೇ ದಿನ ಕಳೆಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಕಲಿಕೆಯತ್ತ ಗಮನ ಹರಿಸುವಂತಾಗಿತ್ತು.

ಬೆಸೆದ ಸಂಪರ್ಕ:
ವಾರದಿಂದ ಸ್ಥಗಿತಗೊಂಡಿದ್ದ ಕೊಡಗು- ಮಂಗಳೂರು ಸಂಪರ್ಕ ಗುರುವಾರದಿಂದ ಮತ್ತೆ ಶುರುವಾಯಿತು. ಪ್ರಾಯೋಗಿಕವಾಗಿ ಆರಂಭಿಸಿದ ಮಿನಿ ಬಸ್‌ಗಳಲ್ಲಿ ಕೊಡಗಿಗೆ ತೆರಳುವವರಿಗಿಂತ ನಿರ್ಗಮಿಸುವವರ ಸಂಖ್ಯೆ ಹೆಚ್ಚಿತ್ತು. ಸಂತ್ರಸ್ತದಲ್ಲಿರುವ ಸಂಬಂಧಿಕರು, ಸ್ನೇಹಿತರನ್ನು ಕಾಣಲು ಬಂದವರು ಸಹ ಸಂಜೆ ಹೊತ್ತಿಗೆ ಮಂಗಳೂರಿಗೆ ಮರಳಿದರು.

ನಿರಾಶ್ರಿತರ ಕೇಂದ್ರಗಳಲ್ಲಿ ನೆಲೆಸಿದವರ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಕೊಡಗಿನಂತೆ ಪೂರೈಕೆಯಾಗುತ್ತಿದ್ದ ಪರಿಹಾರ ಸಾಮಗ್ರಿಗಳ ಪ್ರಮಾಣವು ತಗ್ಗಿದೆ. ಹಾಗಾಗಿ ನಾನಾ ಭಾಗಗಳಿಂದ ಬರುವ ಪರಿಹಾರ ಸಾಮಗ್ರಿಗಳನ್ನು ಸರ್ಕಾರದ ನಿಯಂತ್ರಣದಲ್ಲಿರುವ ಗೋದಾಮುಗಳಲ್ಲಿ ದಾಸ್ತಾನು ಮಾಡಿ ವ್ಯವಸ್ಥಿತವಾಗಿ ಅಗತ್ಯವಿದ್ದವರಿಗೆ ಹಂಚಿಕೆ ಮಾಡುವ ಕಾರ್ಯದಲ್ಲಿ ಜಿಲ್ಲಾಡಳಿತ ತೊಡಗಿಸಿಕೊಂಡಿದೆ.

ರಾಜಕಾರಣಿಗಳ ಭೇಟಿ- ಸಾಂತ್ವನ:
ಸಂತ್ರಸ್ತ ಜನರಿಗೆ ಸಾಂತ್ವನ ಹೇಳಲು, ಪರಿಸ್ಥಿತಿ ಅವಲೋಕಿಸುವ ಸಲುವಾಗಿ ರಾಜಕಾರಣಿಗಳು ದಂಡ ಹರಿದು ಬರುತ್ತಲೇ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಕೃಷ್ಣ ಬೈರೇಗೌಡ ಇತರರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರಾಶ್ರಿತರ ಕೇಂದ್ರದಲ್ಲಿರುವವರು, ಸಂತ್ರಸ್ತರ ಅಹವಾಲು ಆಲಿಸಿದರು.

ಇನ್ನೊಂದೆಡೆ ಕುಸಿದ ರಸ್ತೆ, ಸೇತುವೆಗಳ ತಾತ್ಕಾಲಿಕ ದುರಸ್ತಿ, ಪುನರ್‌ ನಿರ್ಮಾಣ ಕಾರ್ಯವೂ ಭರದಿಂದ ಸಾಗಿತ್ತು. ಹತ್ತಾರು ಜೆಸಿಬಿಗಳು ದಿನವಿಡೀ ಕಾರ್ಯ ನಿರ್ವಹಿಸಿ ಸಂಪರ್ಕ ಸುಧಾರಿಸುವ ಕಾರ್ಯ ಮುಂದುವರಿಸಿವೆ. ನಡೆದಾಡಲು ಆತಂಕಪಡುತ್ತಿದ್ದ ಜನ ಸಣ್ಣಪುಟ್ಟ ಕಾರ್ಯಗಳಿಗೆ ವಾಹನಗಳನ್ನು ಬಳಸಲಾರಂಭಿಸಿದ್ದಾರೆ. ವ್ಯಾಪಾರ- ವಹಿವಾಟು ಕೂಡ ಸಣ್ಣ ಪ್ರಮಾಣದಲ್ಲಿ ಶುರುವಾಗಲಾರಂಭಿಸಿದೆ.

ಆಗದತ್ತ ಚಿತ್ತ:
ಬುಧವಾರ ಬಿಡುವು ನೀಡಿದ್ದ ಮಳೆರಾಯ ಗುರುವಾರ ಮತ್ತೆ ಪ್ರತ್ಯಕ್ಷವಾಗಿದ್ದರಿಂದ ಸಂತ್ರಸ್ತರು ಇನ್ನಷ್ಟು ಕಂಗಾಲಾಗಿದ್ದರು. ಆಗಸದತ್ತಲೇ ಮುಖ ಮಾಡಿದ್ದ ಮಂದಿ ಕಾರ್ಮೋಡಗಳನ್ನು ಕಂಡಾಗ ಭೀತಿಗೆ ಒಳಗಾಗುತ್ತಿದ್ದರು. ಮತ್ತೆ ಭಾರಿ ಮಳೆ ಸುರಿಯಲಾರಂಭಿಸಿದರೆ ಉಂಟಾಗುವ ಪರಿಸ್ಥಿತಿಯನ್ನು ನೆನೆದು ಆತಂಕದಲ್ಲಿದ್ದರು.

ಎಸ್ಟೇಟ್‌ಗಳು ಆನೆಗಳು:
ಈ ಮಧ್ಯೆ ಭಾರಿ ಮಳೆ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಆನೆಗಳು ಎಸ್ಟೇಟ್‌ಗಳತ್ತ ನುಗ್ಗಿ ಆಶ್ರಯ ಪಡೆದಿರುವುದನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಇದು ಎಸ್ಟೇಟ್‌ ಮಾಲೀಕರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ನಷ್ಟೇ ಸಮೀಕ್ಷೆ ನಡೆಸಿ ಮುಂದಿನ ಕ್ರಮ ವಹಿಸಲು ಇಲಾಖೆ ನಿರ್ಧರಿಸಿದೆ.

ಕೊಡಗಿನ ಉಂಟಾಗಿರುವ ಅನಾಹುತಗಳ ಜತೆಗೆ ಕಾರಣವಾದ ಅಂಶಗಳ ಪತ್ತೆ ಕುರಿತ ವಿಶ್ಲೇಷಣೆ ಮುಂದುವರಿದಿದ್ದು, ಮತ್ತೆ ಹಸಿರು, ವನ ಸೃಷ್ಟಿವ ಪ್ರಯತ್ನಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಕೊಡಗು ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸಿದ ಅನಾಹುತ ಮತ್ತೆ ಸಂಭವಿಸದಂತೆ ತಡೆಯಲು ಪಶ್ಚಿಮ ಘಟ್ಟ ಸಂರಕ್ಷಣೆ ಅನಿವಾರ್ಯ. ಅದಕ್ಕಾಗಿ ಡಾ.ಕಸ್ತೂರಿರಂಗನ್‌ ವರದಿ ಅನುಷ್ಠಾನ ಅತ್ಯಗತ್ಯ. ಆ ಹಿನ್ನೆಲೆಯಲ್ಲಿ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯು ಗೌಪ್ಯವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದೆ ಎಂಬ ಮಾತು ಕೇಳಿಬಂದಿದೆ. ಒಟ್ಟಾರೆ ಕೊಡಗು ಸಹಜ ಸ್ಥಿತಿಯತ್ತ ಮರಳುವ ಪ್ರಯತ್ನಗಳು ಗುರುವಾರ ಗೋಚರಿಸಿತು.

ಭೂಕಂಪದಿಂದ ಈ ಅನಾಹುತವೇ?
ಬೆಂಗಳೂರು: ಗುಡ್ಡಗಳ ಕುಸಿತದಿಂದ ತತ್ತರಿಸಿರುವ ಕೊಡಗಿನಲ್ಲಿ ಈ ಮೊದಲೇ ಸಣ್ಣ ಪ್ರಮಾಣದ ಭೂಕಂಪನ ಸಂಭವಿಸಿತ್ತು ಎನ್ನುವುದು ತಡವಾಗಿ ಬೆಳಕಿಗೆಬಂದಿದ್ದು, ಇದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ದಕ್ಷಿಣ ಕನ್ನಡ ಮತ್ತು ಕೊಡಗಿನ ನಡುವೆ ಜುಲೈ 9ರಂದು ಮಧ್ಯಾಹ್ನ 12.52ರ ಸುಮಾರಿಗೆ ಭೂಕಂಪನವಾಗಿದ್ದು, ಇದರ ಪ್ರಮಾಣ ರಿಕ್ಟರ್‌ ಮಾಪಕದಲ್ಲಿ 3.4ರಷ್ಟು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಈ ಕಂಪನ ಕಂಡುಬಂದಿದ್ದು, ಕೆಲ ಸ್ಥಳೀಯರಿಗೂ ಇದರ ಅನುಭವ ಆಗಿದೆ. ಗುಡ್ಡಗಳ ಕುಸಿತ ಮತ್ತು ಪ್ರವಾಹಕ್ಕೆ ಇದು ಮುನ್ಸೂಚನೆ ಆಗಿತ್ತು ಎಂದೂ ಹೇಳಲಾಗುತ್ತಿದೆ.

ಮೊದಲೇ ಭೂಕಂಪನ ಮತ್ತು ತೀವ್ರ ಮಳೆಯ ಮುನ್ಸೂಚನೆ ಇದ್ದಾಗ್ಯೂ, ಸರ್ಕಾರದ ನಿರ್ಲಕ್ಷ್ಯ ಇಲ್ಲಿ ಎದ್ದುಕಾಣುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಅನಾಹುತದ ಪ್ರಮಾಣವನ್ನು ತಗ್ಗಿಸಬಹುದಿತ್ತು ಎಂದು ಸ್ಥಳೀಯರು ಆರೋಪಿಸುತ್ತಾರೆ. ಈ ಮಧ್ಯೆ ಕೇಂದ್ರ ಭೂವಿಜ್ಞಾನಗಳ ಸಚಿವಾಲಯದ ಭೂಕಂಪಶಾಸ್ತ್ರ ಕೇಂದ್ರಕ್ಕೆ ಪತ್ರ ಬರೆದಿರುವ ರಾಜ್ಯ ಸರ್ಕಾರ, ಭೂಕಂಪನ ಸಂಭವಿಸಿದ ಒಂದು ತಿಂಗಳ ನಂತರ ಕೊಡಗಿನಲ್ಲಿ ಮಣ್ಣು ಕುಸಿತ ಆಗಿದೆ. ಆದರೆ, ಈಗ ಭೂಕಂಪನದಿಂದ ಮಣ್ಣುಕುಸಿತ ಸಂಭವಿಸಿದೆ ಎಂಬುದು ಕೇವಲ ವದಂತಿ ಎಂದು ಸ್ಪಷ್ಟನೆ ನೀಡಿದೆ. ಜತೆಗೆ ಈ ಸಂಬಂಧದ ಹೆಚ್ಚಿನ ಮಾಹಿತಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿಗಳ ಸಂಪರ್ಕ ಕಲ್ಪಿಸಲು ದೂರವಾಣಿ ಸಂಖ್ಯೆ ನೀಡುವಂತೆ ಕೋರಿದೆ.

ಒಂದಕ್ಕೊಂದು ಸಂಬಂಧ ಇಲ್ಲ: ಜಿಎಸ್‌ಐ
ಭೂಕಂಪನ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಭಾರತೀಯ ಭೂಸರ್ವೇಕ್ಷಣಾ ನಿರ್ದೇಶಕ ಕೆ.ವಿ. ಮಾರುತಿ, “ಕೊಡಗು ಮತ್ತು ದಕ್ಷಿಣ ಕನ್ನಡದ ನಡುವೆ ಜುಲೈ 9ರಂದು ಸಂಭವಿಸಿದ ಭೂಕಂಪನಕ್ಕೂ ಕೊಡಗಿನಲ್ಲಿ ಈಚೆಗೆ ನಡೆದ ಪ್ರವಾಹ ಮತ್ತು ಭೂಕುಸಿತಕ್ಕೂ ಯಾವುದೇ ಸಂಬಂಧ ಇಲ್ಲ. ಭೂಕಂಪನದ ಒಂದು ತಿಂಗಳ ನಂತರ ಈ ಮಣ್ಣುಕುಸಿತ ಆಗಿದೆ. ಹಾಗಾಗಿ, ಒಂದಕ್ಕೊಂದು ತಳುಕು ಹಾಕುವುದು ಸರಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

“ಭೂಕಂಪಕ್ಕೂ ಮತ್ತು ಮಣ್ಣುಕುಸಿತಕ್ಕೂ ಸಂಬಂಧ ಇರುವುದೇ ಇಲ್ಲ ಎಂದಲ್ಲ. ಸಂಬಂಧ ಇದ್ದರೂ ತಿಂಗಳಗಟ್ಟಲೆ ಅಂತರದ ನಂತರ ಪರಿಣಾಮ ಬೀರುವುದಿಲ್ಲ. ಮೇಲ್ನೋಟಕ್ಕೆ ಹೇಳುವುದಾದರೆ, ತೀವ್ರ ಮಳೆಯಿಂದ ಮಣ್ಣುಕುಸಿತ ಸಂಭವಿಸಿದೆ. ಆದರೆ, ನಿಖರ ಕಾರಣಗಳ ಬಗ್ಗೆ ಅಧ್ಯಯನದ ನಂತರ ಗೊತ್ತಾಗಲಿದೆ’ ಎಂದೂ ಅವರು ಹೇಳಿದರು.

Comments are closed.