ಕರ್ನಾಟಕ

ಶಿಕ್ಷಕರೇ ಅಲ್ಲದವರು, ಪದವಿಯನ್ನೇ ಪಡೆಯದವರು ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗುವುದು ವಿಪರ್ಯಾಸ : ಡಾ.ನರೇಶ್ಚಂದ್ ಹೆಗ್ಡೆ

Pinterest LinkedIn Tumblr

ಮಂಗಳೂರು : ಕರ್ನಾಟಕ ವಿಧಾನಮಂಡಲದ “ಮೇಲ್ಮನೆ ” ಎನಿಸಿದ ವಿಧಾನಪರಿಷತ್ತಿನ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಬರುವ ಜೂನ್ 3 ರಂದು ನಡೆಯಲಿದೆ . ಸುಶಿಕ್ಷಿತರ ,ಮೇಧಾವಿಗಳ ಮತ್ತು ಬುದ್ದಿವಂತರ ಈ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಓರ್ವ ವಿದ್ಯಾವಂತ ಮತ್ತು ಸ್ವತಃ ಶಿಕ್ಷಕನೇ ಆಗಿರುವ ಅಭ್ಯರ್ಥಿಯೇ ಬೇಕು ಎಂಬ ಪರಿಕಲ್ಪನೆಯಡಿ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದೇನೆ ಎಂದು ಡಾ.ನರೇಶ್ಚಂದ್ ಹೆಗ್ಡೆ, ಹೆಬ್ರಿಬೀಡು ಅವರು ತಿಳಿಸಿದರು.

ನಗರದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು. ನಾನು ಈ ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದು ಮೇ -16 ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಧಿಕೃತವಾಗಿ ನನ್ನ ಉಮೇದ್ವಾರಿಕೆ ಯ ನಾಮಪತ್ರವನ್ನು ಸಲ್ಲಿಸಿದ್ದೇನೆ ಎಂದರು.

ನೈಋತ್ಯ ಶಿಕ್ಷಕರ ಕ್ಷೇತ್ರ ಎನ್ನುವಂತಹದ್ದು ಅತ್ಯಂತ ಸುಶಿಕ್ಷಿತ ಮತದಾರರ ಕ್ಷೇತ್ರವೆನಿಸಿದೆ.ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದವರು ಎಂಬುದು ಉಲ್ಲೇಖನೀಯ. ನೈರುತ್ಯ ಶಿಕ್ಷಕರ ಕ್ಷೇತ್ರ ಎಂಬುದು ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿ ,ರಾಜಕಾರಣಿಗಳು ,ಶಿಕ್ಷಕರೇ ಅಲ್ಲದವರು ,ಕೆಲವೊಂದು ಸಂದರ್ಭಗಳಲ್ಲಿ ಪದವಿಯನ್ನೇ ಪಡೆಯದವರು ಈ ಸುಶಿಕ್ಷಿತ ಮತದಾರರ ಕ್ಷೇತ್ರದಿಂದ ಚುನಾಯಿತರಾಗಿದ್ದು ಮಾತ್ರ ವಿಪರ್ಯಾಸ.

ಈ ಬಾರಿ ಜರುಗಲಿರುವ ಜೂನ್ -3 ರ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದಸುಮಾರು 22 ಸಾವಿರಕ್ಕೂ ಅಧಿಕ ಮಂದಿ ಶಿಕ್ಷಕರು ಮತದಾರರಾಗಿ ನೊಂದಾಯಿಸಿಕೊಂಡಿದ್ದಾರೆ ಎಂದು ಅಂಕಿ -ಅಂಶಗಳು ತಿಳಿಸುತ್ತಿವೆ.ಕೊಡಗು ದಕ್ಷಿಣ ಕನ್ನಡ,ಉಡುಪಿ ,ಚಿಕ್ಕಮಗಳೂರು ,ಶಿವಮೊಗ್ಗ -ಹೀಗೆ ಐದು ಪೂರ್ತಿ ಕಂದಾಯ ಜಿಲ್ಲೆಗಳು ಹಾಗು ದಾವಣಗೆರೆ ಜಿಲ್ಲೆಯ ನ್ಯಾಮತಿ ,ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳು ಈ ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿವೇ. ಕರಾವಳಿ ,ಮಲೆನಾಡು ಮತ್ತು ಬಯಲುಸೀಮೆ…ಹೀಗೆ ಮೂರೂ ರೀತಿಯ ಭೌಗೋಳಿಕ ವಿಭಾಗಗಳನ್ನು ಈ ನಮ್ಮ ನೈರುತ್ಯ ಶಿಕ್ಷಕರ ಕ್ಷೇತ್ರವು ಒಳಗೊಂಡಿದೆ.

ಕರಾವಳಿ ಮತ್ತು ಮಲೆನಾಡಿನ ಸಂಗಮ ಸ್ಥಾನವಾದ ನಿಸರ್ಗ ರಮಣೀಯ ಹೆಬ್ರಿಯ ಪ್ರತಿಷ್ಠಿತ ಹೆಬ್ರಿಬೀಡು ಮನೆತನದಲ್ಲಿ ಜನಿಸಿರುವುದು ನನ್ನ ಸೌಭಾಗ್ಯ. ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಎಂ.ಬಿ.ಬಿ.ಎಸ್, ಎಂ.ಎಸ್ (ಸರ್ಜರಿ) ಮತ್ತು ಎಂ.ಸಿ.ಎಚ್ (ಸಿ.ಟಿ. ವಿ.ಎಸ್ ) ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ನಾನು ಈ ವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ಮೆಲಕಾ-ಮಣಿಪಾಲ ಮೆಡಿಕಲ್ ಕಾಲೇಜು ಮಲೇಷ್ಯಾ, ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ಸಂಸ್ಥೆ, ಬೆಂಗಳೂರು, ಶ್ರೀ ಗೋಕುಲಂ ಸ್ಪೆಷಾಲಿಟಿ ಆಸ್ಪತ್ರೆ ಸೇಲಂ _ತಮಿಳ್ನಾಡು, ಶ್ರೀ ರಾಜರಾಜೇಶ್ವರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಬೆಂಗಳೂರು ಮೊದಲಾದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾದ್ಯಾಪಕ ,ಪ್ರಾದ್ಯಾಪಕ, ಸಮಾಲೋಚಕ ಮತ್ತು ಹಿರಿಯ ಕುಲಸಚಿವ ಮೊದಲಾದ ಶೈಕ್ಷಣಿಕ ಹುದ್ದೆಗಳನ್ನು ನಿಭಾಯಿಸಿದ್ದೇನೆ .

ನನ್ನ ತಂದೆ ಡಾ.ಮನೋರಂಜನ್ ದಾಸ್ ಹೆಗ್ಡೆಯವರು ಸರಕಾರಿ ವೈದ್ಯಾಧಿಕಾರಿಗಳಾಗಿ ತನ್ನ ಮಾನವೀಯ ಸೇವೆಯಿಂದ ಉಡುಪಿ ಜಿಲ್ಲೆಯಾದ್ಯಂತ ಚಿರಪರಿಚಿತರು ಎನ್ನಲು ನನಗೆ ಅತೀವ ಹೆಮ್ಮೆಯೆನಿಸುತ್ತಿದೆ . ನನ್ನ ತಾಯಿ ಶ್ರೀಮತಿ ಸರೋಜಾ.ಎಂ ಹೆಗ್ಡೆಯವರು ಪದವೀಧರೆಯಾಗಿದ್ದು, ಆದರ್ಶ ಗ್ರಹಿಣಿಯಾಗಿ ಮಹಿಳಾಪರ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.ನನ್ನ ಧರ್ಮಪತ್ನಿ ಡಾ. ಜ್ಯೋತಿರಾವ್ ಕೂಡಾ ವೃತ್ತಿಯಿಂದ ವೈದ್ಯೆಯಾಗಿದ್ದು ಫಾರ್ಮಕಾಲಜಿ ವಿಭಾಗದಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ,ಮಾರ್ಗದರ್ಶನ ನೀಡುತ್ತಿದ್ದಾರೆ.

ನನ್ನ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, ಓರ್ವ ಹ್ರದ್ರೋಗ ಶಸ್ತ್ರಚಿಕಿತ್ಸಾ ತಜ್ಞನಾಗಿ ಹ್ರದ್ರೋಗ ಮತ್ತು ತತ್ಸಂಬಂಧೀ ವಿಷಯಗಳ ಒಟ್ಟು ಇಪ್ಪತ್ತು ವಿಧದ ಬಹು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಕೈಗೊಂಡು ,ಬಹು ದೊಡ್ಡ ಸಂಖ್ಯೆಯ ರೋಗಿಗಳಿಗೆ ಜೀವದಾನ ಮಾಡಿರುವ ವಿನೀತ ಮತ್ತು ವಿನಮ್ರ ಭಾವ ನನಗಿದೆ .ಅನೇಕ ಸಂಶೋಧನಾತ್ಮಕ ಹೃದ್ರೋಗ ಸಂಬಂಧೀ ಪ್ರಬಂಧಗಳನ್ನು ರಾಷ್ಟೀಯ -ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿರುತ್ತೇನೆ .ಐವತ್ತಕ್ಕೂ ಹೆಚ್ಚಿನ ವೈದ್ಯಕೀಯ ಸಮ್ಮೇಳನಗಳು ಮತ್ತು ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತೇನೆ.ನಾನು ಸಿದ್ಧಪಡಿಸಿದ ಹೃದ್ರೋಗಕ್ಕೆ ಸಂಬಂಧಿಸಿದ ವಿಶೇಷ ಸಂಶೋಧನಾ ವರದಿ ದೇಶದ ಪ್ರಮುಖ ವೈದ್ಯಕೀಯ ಜರ್ನಲ್ ಗಳಲ್ಲಿ ಪ್ರಕಟವಾಗಿದೆ.

ಬಹುಬೇಡಿಕೆಯ ಬಿ.ಎಸ್ಸಿ ಮತ್ತು ಎಂ.ಎಸ್ಸಿ (ಪರ್ಪ್ಯೂಷನ್ ಟೆಕ್ನಾಲಜಿ )ಕೋರ್ಸ್ ಗಳಿಗೆ ಸಂಪೂರ್ಣ ಪಠ್ಯಕ್ರಮ ಮತ್ತು ಶಿಷ್ಟಾಚಾರ ನಿಯಮಗಳನ್ನು ರಚಿಸುವ ಮೂಲಕ ಉನ್ನತ ಶಿಕ್ಷಣದ ಪಠ್ಯ ರಚನಾ ಕ್ಷೇತ್ರದಲ್ಲೂ ಕೈಯಾಡಿಸಿದ್ದೇನೆ.

ನಾನು ವೈದ್ಯಕೀಯ ವಿದ್ಯಾರ್ಥಿಯಾಗಿರುವಾಗಲೇ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಗೆ ವಿದ್ಯಾರ್ಥಿ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗುವ ಸದಾವಕಾಶ ನನಗೆ ಲಭಿಸಿತ್ತು. ಮಣಿಪಾಲ ಕೆ.ಎಂ .ಸಿ ಯ ಇಂಟರ್ನ್ ಡಾಕ್ಟರ್ಸ್ ಆಸೋಸಿಯೇಷನ್ನ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೇನೆ . ಗಣನೀಯ ಸಂಖ್ಯೆಯ ಶ್ರೀ ಸಾಮಾನ್ಯರಿಗೆ ಉಚಿತ ಹೃದ್ರೋಗ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಿರುತ್ತೇನೆ .

ಇಂತಹ ವೈದ್ಯಕೀಯ ಮತ್ತು ಶೈಕ್ಷಣಿಕ ಹಿನ್ನೆಲೆ ಹೊಂದಿರುವ ನಾನು ಇದೀಗ ಶಿಕ್ಷಣ ರಂಗದ ಸೇವಾಕಾಂಕ್ಷಿಯಾಗಿ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.

ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜುಗಳವರೆಗಿನ ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ , ಭಾಷಾ ಮಾಧ್ಯಮದ, ಬೋಧಕ ವೃಂದದ,ಬೋಧಕೇತರರ,ಸರಕಾರಿ,ಅನುದಾನಿತ ಮತ್ತು ಅನುದಾನರಹಿತ ವಿದ್ಯಾಸಂಸ್ಥೆಗಳವರ ,ಆಡಳಿತ ಮಂಡಳಿಗಳವರ ಬಹುಮುಖಿ ಸಮಸ್ಯೆಗಳನ್ನು ಆಯಾ ವರ್ಗದಲ್ಲಿ ತಜ್ಞರೆನಿಸಿದವರಿಂದ ಸಲಹೆ ,ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವ ಬದ್ಧತೆ ಖಂಡಿತವಾಗಿಯೂ ನನಗಿದೆ ಎಂದು ಅವರು ವಿವರ ನೀಡಿದರು.

ನನ್ನೆಲ್ಲಾ ವಿಚಾರ, ಚಿಂತನೆ, ಶೈಕ್ಷಣಿಕ ಹಿನ್ನೆಲೆ ಮತ್ತು ಮುಖ್ಯವಾಗಿ ನಾನು ಈ ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿದ ಕಾರಣಗಳನ್ನು ಈಗಾಗಲೇ ನಾನು ತಿಳಿಸಿದ್ದು, ಈ ಶೈಕ್ಷಣಿಕ ಸಮೃದ್ಧ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಿಕ್ಷಕ ಮತದಾರರು ಶಿಕ್ಷಕನೇ ಆದ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು ಅತ್ಯಧಿಕ ಪ್ರಥಮ ಪ್ರಾಶ್ಯಸ್ತದ ಮತಗಳಿಂದ ಗೆಲುವು ಸಾಧಿಸಲು ಸಹಕರಿಸಬೇಕು ಎಂದು ಡಾ.ನರೇಶ್ಚಂದ್ ಹೆಗ್ಡೆ ,ಹೆಬ್ರಿಬೀಡು ಅವರು ಮನವಿ ಮಾಡಿದರು.

Comments are closed.