ಕರ್ನಾಟಕ

ಧಾರಾಕಾರ ಮಳೆಗೆ ಶಿರಾಡಿ ಘಾಟ್ ನಲ್ಲಿ ಕಂದಕಕ್ಕೆ ಬಿದ್ದ ಟ್ಯಾಂಕರ್; ಮೂವರು ಸಾವು

Pinterest LinkedIn Tumblr

ಮಡಿಕೇರಿ: ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಭೂಕುಸಿತ, ನೆರೆ ಪ್ರವಾಹ ಉಂಟಾಗಿದೆ. ಶಿರಾಡಿ ಘಾಟಿಯಲ್ಲಿ 30 ಅಡಿ ಆಳದ ಕಂದಕಕ್ಕೆ ಟ್ಯಾಂಕರ್ ಬಿದ್ದು ಮೂವರು ಮೃತಪಟ್ಟಿದ್ದಾರೆ. ಸತತ ಮಳೆಯಿಂದ ಭೂಕುಸಿತವುಂಟಾಗಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿರಾಡಿ ಘಾಟಿಯಲ್ಲಿ ಸತತ ಭೂಕುಸಿತ ಉಂಟಾಗುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ಐಷಾರಾಮಿ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಭಾರೀ ವಾಹನಗಳ ಸಂಚಾರದ ಚಲನೆಗೆ ಆಗಸ್ಟ್ 25ರವರೆಗೆ ಹಾಸನ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಶಿರಾಡಿ ಘಾಟ್ ಗೆ ಬದಲು ಚಾರ್ಮಾಡಿ ಘಾಟಿಯ ರಸ್ತೆ ಸಂಚಾರವನ್ನು ಬಳಸುವಂತೆ ವಾಹನ ಸಂಚಾರರಿಗೆ ಜಿಲ್ಲಾಡಳಿತ ಸೂಚಿಸಿದೆ.

ಕೊಡಗು ಜಿಲ್ಲೆಯಲ್ಲಿ ಕೂಡ ನಿನ್ನೆ ಮತ್ತು ಮೊನ್ನೆ ಅನೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಮಡಿಕೇರಿಗೆ ಹೋಗುವ ಎಲ್ಲಾ ರಸ್ತೆಗಳನ್ನು ತಡೆಹಿಡಿಯಲಾಗಿದೆ. ಇದರಿಂದ ಸ್ಥಳೀಯರು ಮತ್ತು ಬೇರೆ ಕಡೆಗಳಿಂದ ಬಂದ ಪ್ರವಾಸಿಗರು ಕುಶಾಲನಗರದಲ್ಲಿ ಮತ್ತು ಮಂಗಳೂರು-ಮಡಿಕೇರಿ ಹೆದ್ದಾರಿಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

ಕೊಡಗಿನ ಕಾಲೂರು ಗ್ರಾಮದಲ್ಲಿ ಭಾರೀ ಭೂಕುಸಿತಕ್ಕೆ ಕನಿಷ್ಠ 7 ಕುಟುಂಬಸ್ಥರು ಜೀವ ಕಳೆದುಕೊಂಡಿದ್ದಾರೆ. ಕುಶಾಲನಗರದಲ್ಲಿ ಪರಿಹಾರ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ.

ದಾವಣಗೆರೆ, ಹೊನ್ನಾಳಿ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಬೃಹತ್ ಪ್ರವಾಹ ಉಂಟಾಗಿದೆ. ತುಂಗಾ ಮತ್ತು ಭದ್ರಾ ಅಣೆಕಟ್ಟುಗಳಿಂದ ನೀರು ಹೊರಬಿಟ್ಟ ಕಾರಣ ಪ್ರವಾಹ ಉಂಟಾಗಿದೆ. ಪುನರ್ವಸತಿ ಕಾರ್ಯಕ್ಕೆ 100 ಕೋಟಿ ರೂ ಪ್ಯಾಕೇಜ್ ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೇಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಅತಿ ಮಳೆಪೀಡಿತ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಮಧ್ಯೆ ಮಳೆ ಸಂಬಂಧಿ ಅನಾಹುತಗಳಿಂದ ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕಂದಾಯ ಇಲಾಖೆ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ತುರ್ತು ಪರಿಹಾರಕ್ಕೆಂದು 200 ಕೋಟಿ ರೂಪಾಯಿ ಠೇವಣಿಯಿಡಲಾಗಿದೆ ಎಂದು ತಿಳಿಸಿದ್ದಾರೆ.

Comments are closed.