ಕರ್ನಾಟಕ

ಮಲೆನಾಡಿನಲ್ಲಿ ನಿಲ್ಲದ ಮಳೆ; ಅತಿವೃಷ್ಟಿಯಿಂದಾಗಿ ನೂರಾರು ಕೋಟಿ ನಷ್ಟ

Pinterest LinkedIn Tumblr


ಬೆಂಗಳೂರು: ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಹಾಗೂ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಪ್ರವಾಹ ಭೀತಿ ಎದುರಾಗಿದೆ. ಮಳೆ ಅವಘಡದಿಂದ ಈವರೆಗೂ ನೂರಾರು ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮಲೆನಾಡು ಸಂಪೂರ್ಣ ಸ್ತಬ್ಧಗೊಂಡಿದೆ. ಕಳೆದೊಂದು ವಾರದಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸಾವಿರಾರು ಎಕರೆಯ ಕಾಫಿ, ಅಡಿಕೆ ತೋಟಗಳು ಜಲಾವೃತಗೊಂಡಿವೆ. ಮಳೆಯ ಹಿನ್ನೆಲೆಯಲ್ಲಿ ಭದ್ರಾ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದ ಒಳಹರಿವು ಬಂದು ಸೇರಿರುವುದರಿಂದ ಮಂಗಳವಾರ ಸಂಜೆಯಿಂದ ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂನಿಂದ ಅಪಾರಪ್ರಮಾಣದ ನೀರನ್ನು ಹೊರಬಿಟ್ಟ ಪರಿಣಾಮ ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಸೇತುವೆ ಮುಳುಗಡೆಯಾಗಿದ್ದು, ಹಲವು ಮನೆಗಳು ಮುಳುಗುವ ಸಾಧ್ಯತೆ ಇದೆ. ಸ್ಥಳಕ್ಕೆ ಶಾಸಕರಾದ ಡಿ.ಎಸ್.ಸುರೇಶ್ ಭೇಟಿ ನೀಡಿ, ಗ್ರಾಮಸ್ಥರಿಗೆ ಗಂಜಿ ಕೇಂದ್ರ ತೆರೆಯುವಂತೆ ತಹಸೀಲ್ದಾರ್​ಗೆ ಸೂಚಿಸಿದರು. ಗ್ರಾಮಸ್ಥರು ರಂಗೇನಹಳ್ಳಿಯ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದಾವಣಗೆರೆಯ ಹರಿಹರದ ಉಕ್ಕಡಗಾತ್ರಿ ಹಾಗೂ ಹೊನ್ನಾಳಿ ತಾಲೂಕಿನಲ್ಲಿ ಪ್ರವಾಹ ಸಂಕಷ್ಟ ಎದುರಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಇಂದು

ಚಿಕ್ಕಮಗಳೂರಿನಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್​ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಭೇಟಿಯಾಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಮನವಿ ಮಾಡಲಿದೆ. ನಂತರ ಜಾರ್ಜ್​ ಅವರು ಶೃಂಗೇರಿ ಕೊಪ್ಪ ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಕೊಪ್ಪ ತಾಲೂಕಿನ ಮೇಗುಂದಾ ಸಮೀಪ ನಾಲ್ಕು ಗ್ರಾಮಗಳಿಗೆ ಸಂಚಾರ ಕಲ್ಪಿಸುವ ಗುಡ್ಡೆತೋಟ ಸಮೀಪದ ರಸ್ತೆಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಹೆಚ್ಚಿದ ಕಾವೇರಿ ಒಳಹರಿವು

ಕಾವೇರಿ ನದಿಯಲ್ಲಿ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಹತ್ತಾರು ಮನೆಗಳು ಜಲಾವೃತಗೊಂಡಿವೆ. ಮೈಸೂರು-ಕೊಣನೂರು ರಸ್ತೆ ಬಳಿ ಜಲಾವೃತವಾಗಿದೆ.

ಸಕಲೇಶಪುರ ತಾಲೂಕಿನ ಶಿರಾಡಿಘಾಟ್​ನಲ್ಲಿ ಹೆತ್ತೂರು ಗ್ರಾಮದ ಬಳಿ ಭೂಮಿ ಬಿರುಕುಬಿಟ್ಟಿದ್ದು, ವಾಹನ ಸವಾರರು ಪರಡಾಡುವಂತಾಗಿದೆ. ಘಾಟ್​ನಲ್ಲಿ ಎರಡು ಸರ್ಕಾರಿ ಬಸ್ಸಿಗಳು ಕಿರಿದಾದ ಕಂದಕಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಶಿರಾಡಿ ಸಂಚಾರ ಪೂರ್ಣ ಬಂದ್

ಶಿರಾಡಿಘಾಟ್​ ರಸ್ತೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕುಂದಾಪುರದ ಕೆಎಸ್​ಆರ್​ಟಿಸಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಚಾರ್ಮಾಡಿ ಮಾರ್ಗವಾಗಿ ಎಕ್ಸ್​ಪ್ರೆಸ್​ ಬಸ್​ ಹೊರತುಪಡಿಸಿ ಉಳಿದೆಲ್ಲ ಬಸ್​ ಸಂಚಾರವನ್ನು ಬಂದ್​ ಮಾಡಲಾಗಿದೆ.

ಬೋರ್ಗರೆಯುತ್ತಿರುವ ಜೋಗ

ಶಿವಮೊಗ್ಗದಲ್ಲಿಯೂ ಧಾರಾಕಾರ ಮಳೆ ಮುಂದವರೆದಿದ್ದು, ಲಿಂಗನಮಕ್ಕಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಜೋಗ ಜಲಪಾತ ಬೋರ್ಗರೆಯುತ್ತಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

Comments are closed.