ಕರ್ನಾಟಕ

ಕೆಆರ್​ಎಸ್​ ಭರ್ತಿಗೆ ಇನ್ನು 4 ಅಡಿ ಬಾಕಿ!

Pinterest LinkedIn Tumblr


ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್​ಎಸ್​ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದ್ದು, ಕೆಆರ್​ಎಸ್​ ಭರ್ತಿಯಾಗಲು ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ.

ಶುಕ್ರವಾರ ಬೆಳಗ್ಗೆ ವೇಳೆಗೆ ಕೆಆರ್​ಎಸ್​ನಲ್ಲಿ 120.20 ಅಡಿ ನೀರು ಸಂಗ್ರಹವಾಗಿದ್ದು, 39,737 ಕ್ಯೂಸೆಕ್​ ಒಳ ಹರಿವು ಇದೆ. ಒಳ ಹರಿವು ಇದೇ ಪ್ರಮಾಣದಲ್ಲಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. 2009ರ ಜುಲೈ 24 ರಂದು ಕೆಆರ್​ಎಸ್​ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. ಆ ನಂತರ ಜಲಾಶಯ ಪೂರ್ಣವಾಗಿ ತುಂಬಿರಲಿಲ್ಲ. 2017ರಲ್ಲಿ ಜಲಾಶಯ 114.32 ಅಡಿ ಮಾತ್ರ ತುಂಬಿತ್ತು.

ಹೇಮಾವತಿ ಜಲಾಶಯಕ್ಕೂ ಸಹ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಶುಕ್ರವಾರ ಬೆಳಗ್ಗೆ 217.80 ಅಡಿ ನೀರು ತುಂಬಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಇನ್ನು ಕೇವಲ 5 ಅಡಿ ನೀರು ಬರಬೇಕಷ್ಟೇ. 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 32.79 ಟಿಎಂಸಿ ನೀರು ಸಂಗ್ರಹವಾಗಿದೆ.

ಜುಲೈ 20ಕ್ಕೆ ಬಾಗಿನ

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಜುಲೈ 20 ರಂದು ಕೆಆರ್​ಎಸ್​ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶುಕ್ರವಾರ ಅಧಿಕಾರಿಗಳು ಬೆಳಗ್ಗೆ ಕೆಆರ್​ಎಸ್​ ಡ್ಯಾಂ ಬಳಿ ಹೆಲಿಪ್ಯಾಡ್​ ಅನ್ನು ಪರಿಶೀಲನೆ ನಡೆಸಿದರು.

Comments are closed.