ಕರ್ನಾಟಕ

ಬಿಜೆಪಿ ಆಡಳಿತದಲ್ಲಿ ನಮ್ಮ ದೇಶ ‘ಹಿಂದೂ ಪಾಕಿಸ್ತಾನ’ವಾಗಲಿದೆ: ಶಶಿ ತರೂರ್‌

Pinterest LinkedIn Tumblr


ಬೆಂಗಳೂರು: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ‘ಹಿಂದೂ ಪಾಕಿಸ್ತಾನ’ ನಿರ್ಮಾಣಗೊಳ್ಳುವ ಸನ್ನಿವೇಶ ಎದುರಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಈ ಹೇಳಿಕೆಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ.

ಬಿಜೆಪಿ ಮತ್ತೆ ಗೆದ್ದರೆ ಭಾರತ ‘ಹಿಂದೂ ಪಾಕಿಸ್ತಾನ’ವಾಗಲಿದೆ: ಶಶಿ ತರೂರ್‌

‘ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದರೆ ನಮ್ಮ ಸಂವಿಧಾನ ಅಪಾಯದಲ್ಲಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಈಗಿರುವ ಸಂವಿಧಾನವನ್ನು ಹಾಳುಗೆಡವಿ ಹೊಸ ಸಂವಿಧಾನವನ್ನು ಬರೆಯುತ್ತಾರೆ’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಹೇಳಿರುವುದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

ಕೇಸರಿ ಪಕ್ಷವು ಹೊಸದಾಗಿ ಬರೆಯುವ ಸಂವಿಧಾನವು ಭಾರತವನ್ನು ಅಲ್ಪ ಸಂಖ್ಯಾತರಿಗೆ ಬೆಲೆ ನೀಡದ ಪಾಕಿಸ್ತಾನದಂತಾಗಿಸಲಿದೆ ಎಂದು ಶಶಿ ತರೂರ್‌ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ‘ಹಿಂದೂ ಪಾಕಿಸ್ತಾನ’ ಎಂದು ಉಲ್ಲೇಖಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್‌ ಮಾಡಿದ್ದಾರೆ.

ಭಾರತವನ್ನು ಕೀಳಾಗಿ ಕಾಣುವ ಮತ್ತು ಹಿಂದುಗಳನ್ನು ದೂಷಿಸುವ ಯಾವುದೇ ಸದಾವಕಾಶವನ್ನು ಕಾಂಗ್ರೆಸ್‌ ತಪ್ಪಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡ ತಿರುಗೇಟು ನೀಡಿದ್ದಾರೆ. ‘ಹಿಂದೂ ಭಯೋತ್ಪಾದನೆ’ ಯಿಂದ ‘ಹಿಂದೂ ಪಾಕಿಸ್ತಾನ’ಕ್ಕೆ ಹೋಲಿಸುತ್ತಿರುವುದರಿಂದ ಕಾಂಗ್ರೆಸ್‌ನ ಆರೋಪಗಳನ್ನು ಪಾಕಿಸ್ತಾನ ಎಂಜಾಯ್‌ ಮಾಡುತ್ತಿದೆ ಎಂದು ಸಂಬಿತ್‌ ಪಾತ್ರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಮುನ್ನಡೆಸುವುದಕ್ಕಿಂತ ರಾಜಕೀಯ ಸಮಾವೇಶಗಳನ್ನು ನಡೆಸುವುದರಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಕಾಂಗ್ರೆಸ್‌ ಪಕ್ಷ, ಒಂದು ಕುಟುಂಬ ಮತ್ತು ಕಾಂಗ್ರೆಸ್‌ ಮಾಡಿರುವ ಎಲ್ಲವನ್ನು ಟೀಕಿಸುತ್ತಲೇ ಬಂದಿರುವುದನ್ನು ಕೇಳುತ್ತ ಬಂದಿದ್ದೇವೆ ಎಂದು ತರೂರ್‌ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಪಂಜಾಬ್‌ನಲ್ಲಿ ನಡೆದ ರೈತರ ಸಮಾವೇಶದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಶಶಿ ತರೂರ್‌ ಮೋದಿ ವಿರುದ್ಧ ವಾಕ್‌ ಪ್ರಹಾರ ನಡೆಸಿದ್ದಾರೆ.

Comments are closed.