ರಾಷ್ಟ್ರೀಯ

ಮುಸಲ್ಮಾನ ಹುಡುಗಿಗೆ ಹಿಂದು ಕುಟುಂಬದಿಂದ ಹಿಂದು ಧರ್ಮದ ಪ್ರಕಾರ ಕನ್ಯಾದಾನ, ಮುಸ್ಲಿಂ ಪದ್ದತಿ ಪ್ರಕಾರ ನಿಖಾ

Pinterest LinkedIn Tumblr


ರಾಜ್‌ಕೋಟ್: ಹಿಂದು ಮುಸ್ಲಿಂ ನಡುವೆ ವೈಷಮ್ಯದ ಘಟನೆಗಳೇ ಹೆಚ್ಚಿರುವ ಸನ್ನಿವೇಶದಲ್ಲಿ ರಾಜ್‌ಕೋಟ್‌ನಲ್ಲಿನ ಹಿಂದು ಕುಟುಂಬವೊಂದು ಮುಸ್ಲಿಂ ಹುಡುಗಿಯನ್ನು ಸಾಕಿ ಬೆಳೆಸಿದೆಯಲ್ಲದೆ, 2 ಸಂಪ್ರದಾಯದ ಪ್ರಕಾರ ಆಕೆಯ ಮದುವೆ ಮಾಡಿದ್ದಾರೆ.

ಶಬನಮ್‌ ಶೇಖ್‌ ಎಂಬ ಹುಡುಗಿ, ತನ್ನ 5ನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದಳು. ತಂದೆ ಲಾರಿ ಚಾಲಕನಾಗಿದ್ದು, ಪುತ್ರಿಯ ಭವಿಷ್ಯದ ಬಗ್ಗೆ ಕೊಂಚವೂ ಯೋಚಿಸಿರಲಿಲ್ಲ. ಆದರೆ ತಂದೆಯ ಸ್ನೇಹಿತ, ವೃತ್ತಿಯಲ್ಲಿ ಟ್ರಕ್‌ ಡ್ರೈವರ್‌ ಮೇರಾನಾಮ್‌ ಜೋರ ಹಾಗೂ ಕುಟುಂಬದೊಂದಿಗೆ ಶಬನಮ್‌ ಕೂಡಿಕೊಂಡಿದ್ದಾಳೆ. ಸ್ವಂತ ತಂದೆ ತಾಯಿಯಿಂದ ಸಿಗಬೇಕಾದ ಎಲ್ಲ ಪ್ರೀತಿ ವಾತ್ಸಲ್ಯವನ್ನು ಮೇರಾನಾಮ್‌ ಕುಟುಂಬ ಶಬನಮ್‌ಗೆ ನೀಡಿದ್ದಾರೆ.

ಈ ಪ್ರೀತಿಗೆ ಎಂದೂ ಜಾತಿ ಧರ್ಮಗಳು ಅಡ್ಡಿ ಬಂದಿಲ್ಲ. ಶಬನಮ್‌ ಹಿಂದು ಮನೆಯಲ್ಲಿ ತನ್ನ ಧರ್ಮದ ಕೆಲಸ, ಆಚರಣೆಗಳನ್ನು ಮಾಡಲು ಯಾವುದೇ ನಿರ್ಬಂಧಗಳಿರಲಿಲ್ಲ. ಹಿಂದು ಹಾಗೂ ಇಸ್ಲಾಂ ಧರ್ಮದ ಹಬ್ಬಗಳನ್ನು ಸರಿಸಮಾನವಾಗಿ ಸ್ವೀಕರಿಸುತ್ತಿದ್ದ ಆಕೆ, ಎಲ್ಲರಿಗೂ ಪ್ರೀತಿ ಪಾತ್ರಳಾಗಿ ಬೆಳೆದಿದ್ದಳು.

ಇದೀಗ ಶಬನಮ್‌ಗೆ ಮೇರಾನಾಮ್‌ ಮುಸ್ಲಿಂ ಯುವಕನ ಜತೆ ಮದುವೆ ಮಾಡಿಸಿದೆ. ಹಿಂದು ಹಾಗೂ ಇಸ್ಲಾಂ 2 ಧರ್ಮದ ಸಂಪ್ರದಾಯದಂತೆ ಶಬನಮ್‌ ಗಂಡನ ಮನೆ ಸೇರಿದ್ದಾಳೆ. ಇಬ್ಬರು ಪುತ್ರರು ಹಾಗೂ ಪುತ್ರಿ ಹೊಂದಿರುವ ಮೇರಾನಾಮ್‌, ತನ್ನ ಮಕ್ಕಳು ಹಾಗೂ ಶಬನಮ್‌ ಮಧ್ಯೆ ಧರ್ಮದ ವಿರಸ ಬರದಂತೆ ನೋಡಿಕೊಂಡಿದ್ದಾರೆ.

ಶಬನಮ್‌ ಸಹ ನನ್ನ ಮಗಳಂತೆ. ಅವಳಿಗೆ ನಮ್ಮಲ್ಲಿ ಕುರಾನ್‌ ಓದಲೂ ಅವಕಾಶವಿದೆ. ಅವಳ ಧಾರ್ಮಿಕ ಕಾರ್ಯಗಳನ್ನು ಮಾಡಲು ಯಾವುದೇ ಅಡ್ಡಿ ಮಾಡಿಲ್ಲ ಎಂದು ಮೇರಾನಾಮ್‌ ಜೋರಾ ಹೇಳಿದ್ದಾರೆ.

2012ರಲ್ಲಿ ಶಬನಮ್‌ ತಂದೆ ಅಹಮದಾಬಾದ್‌ಗೆ ತೆರಳಿದ ಬಳಿಕ ಈ ವರೆಗೆ ಪತ್ತೆಯಾಗಿಲ್ಲ. ಸ್ಥಳೀಯ ಮುಸಲ್ಮಾನ ಸ್ನೇಹಿತರ ಸಹಾಯದಿಂದ ಒಬ್ಬ ಇಸ್ಲಾಂ ಹುಡುಗನ ಜತೆ ಅವಳ ಮದುವೆ ಮಾಡಲು ಮುಂದಾದೆ. ಹಿಂದು ಧರ್ಮದ ಪ್ರಕಾರ ಕನ್ಯಾದಾನ, ಮುಸ್ಲಿಂ ಪದ್ದತಿ ಪ್ರಕಾರ ನಿಖಾ ಮಾಡುವ ಮೂಲಕ ಮದುವೆ ಮಾಡಲಾಗಿದೆ ಎಂದು ಮೇರಾನಾಮ್‌ ಹರ್ಷ ವ್ಯಕ್ತಪಡಿಸಿದ್ದಾರೆ.

Comments are closed.