ಕ್ರೀಡೆ

ಸುರೇಶ್ ರೈನಾ ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಅಖಾಡಕ್ಕೆ!

Pinterest LinkedIn Tumblr


ನಾಟಿಂಗ್‌ಹ್ಯಾಮ್: ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪವರ್ ಹಿಟ್ಟರ್ ರೈನಾ, ಭಾರತ ಏಕದಿನ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

31 ವರ್ಷದ ಸುರೇಶ್ ರೈನಾ 2015ರ ನವೆಂಬರ್‌ನಲ್ಲಿ ಭಾರತ ಪರ ತಮ್ಮ ಕೊನೆಯ ಏಕದಿನ ಪಂದ್ಯವಾಡಿದ್ದರು. ಮುಂಬಯಿನ ವಾಂಖೆಡೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದ ನಂತರ ಏಕದಿನ ತಂಡದಲ್ಲಿ ರೈನಾ ಸ್ಥಾನ ಕಳೆದುಕೊಂಡಿದ್ದರು.

ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದ್ದ ತಂಡದಲ್ಲಿ ಸುರೇಶ್ ರೈನಾ ಆರಂಭದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಹೈದರಾಬಾದ್‌ನ ಅಂಬಾಟಿ ರಾಯುಡು ಯೋ-ಯೋ ಟೆಸ್ಟ್‌ನಲ್ಲಿ ಫೇಲ್ ಆಗಿ ತಂಡದಿಂದ ಹೊರಬಿದ್ದ ಕಾರಣ, ಅವರ ಬದಲು ರೈನಾಗೆ ಅವಕಾಶ ನೀಡಲಾಗಿತ್ತು.

ಭಾರತ ಪರ ಇದುವರೆಗೆ 223 ಏಕದಿನ ಪಂದ್ಯಗಳನ್ನಾಡಿರುವ ಸುರೇಶ್ ರೈನಾ, 5 ಶತಕಗಳ ಸಹಿತ 5568 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಕರಾಮತ್ ಪ್ರದರ್ಶಿಸಿ 36 ವಿಕೆಟ್‌ಗಳನ್ನು ಪಡೆದಿದ್ದಾರೆ. 2019ರ ಐಸಿಸಿ ವಿಶ್ವಕಪ್ ಟೂರ್ನಿ ಇಂಗ್ಲೆಂಡ್‌ನಲ್ಲೇ ನಡೆಯಲಿರುವುದರಿಂದ ಈ ಸರಣಿಯಲ್ಲಿ ರೈನಾ ಉತ್ತಮ ಪ್ರದರ್ಶನ ತೋರಿದರೆ, ವಿಶ್ವಕಪ್ ತಂಡದಲ್ಲೂ ಸ್ಥಾನ ಗಳಿಸುವ ಅವಕಾಶವಿದೆ. ಅಲ್ಲದೆ ರೈನಾ, ಸದ್ಯ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿರುವ ಏಕೈಕ ಎಡಗೈ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.

Comments are closed.