ಕರ್ನಾಟಕ

ಸಚಿವ ಡಿ.ಕೆ.ಶಿವಕುಮಾರ್‌ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಭಾಗಿ !

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ವಿರುದ್ದ ಬಿಜೆಪಿ ಭಾರೀ ಹೋರಾಟ ನಡೆಸುತ್ತಿದ್ದು, ಇದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ರಾತ್ರಿ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಪಾಲ್ಗೊಂಡು ಕುತೂಹಲಕ್ಕೆ ಕಾರಣವಾಗಿದ್ದಾರೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರಿಗಾಗಿ ಡಿಕೆಶಿ ಔತಣ ಕೂಟ ಆಯೋಜಿಸಿದ್ದು, ಹಲವು ಶಾಸಕರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ , ಸಚಿವ ಎಚ್‌.ಡಿ.ರೇವಣ್ಣ ಅವರು ಪಾಲ್ಗೊಂಡು ಮೂರು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್‌ ಶಾಸಕ ಸುಧಾಕರ್‌ ಅವರೊಂದಿಗೆ ಆಗಮಿಸಿದ ಗೂಳಿ ಹಟ್ಟಿ ಶೇಖರ್‌ ಅವರಿಗೆ ಕೈ ಮತ್ತು ಜೆಡಿಎಸ್‌ ಶಾಸಕರು ಬನ್ನಿ ಶೇಖರ್‌ ಊಟ ಮಾಡಿ , ಊಟ ಮಾಡಲು ಯಾವ ಪಕ್ಷವಾದರೂ ಏನು….ಎಂದು ಸ್ವಾಗತಿಸಿರುವುದಾಗಿ ವರದಿಯಾಗಿದೆ.

ಪಕ್ಷೇತರನಾಗಿ ಆಯ್ಕೆಯಾಗಿದ್ದ ಗೂಳಿಹಟ್ಟಿ ಅವರು ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಬಳಿಕ ಜೆಡಿಎಸ್‌ ಸೇರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ಸೇರ್ಪಡೆಯಾಗಿದ್ದ ಅವರು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.

ಪಾರ್ಟಿಗೆ ತೆರಳಿದ ಕುರಿತು ಗೂಳಿ ಹಟ್ಟಿ ಶೇಖರ್‌ ಅವರು ಇದುವರೆಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಮತ್ತು ಪಕ್ಷದ ನಾಯಕರು ಅವರನ್ನು ಪ್ರಶ್ನಿಸಿರುವ ಕುರಿತೂ ವರದಿಯಾಗಿಲ್ಲ.

Comments are closed.