ಕರ್ನಾಟಕ

ನಟಸಾರ್ವಭೌಮ ಚಿತ್ರದ ಸ್ಪೆಷಲ್ ಸಾಂಗ್ ಗೆ ‘ಪುನೀತ್ ಸ್ಟೆಪ್ಸ್!

Pinterest LinkedIn Tumblr


ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಸಾರ್ವಭೌಮ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕ ಪವನ್ ಒಡೆಯರ್ ಅದ್ಧೂರಿಯಾದೊಂದು ಸೆಟ್ ರೆಡಿ ಮಾಡಿ ಅದರಲ್ಲಿ ವಿಶೇಷವಾದ ಪಾರ್ಟಿ ಸಾಂಗ್ ಒಂದನ್ನು ಚಿತ್ರೀಕರಿಸಿಕೊಂಡಿದ್ದಾರೆ. ಜೊತೆಗೆ ಈ ಹಾಡು ಪುನೀತ್ ಅಭಿಮಾನಿಗಳ ಪಾಲಿಗೆ ಹಬ್ಬವಾಗಲಿದೆ ಎಂಬ ಭರವಸೆಯ ಮಾತುಗಳನ್ನೂ ಆಡಿದ್ದಾರೆ.

ಯೋಗರಾಜ ಭಟ್ ಬರೆದಿರುವ ಈ ಹಾಡಿಗೆ ಡಿ ಇಮ್ಮಾನ್ ಸಂಗೀತ ನೀಡಿದ್ದಾರೆ. ಇದಕ್ಕೆ ಸೂಪರ್ ಆಗಿರೋ ನೃತ್ಯ ಸಂಯೋಜನೆ ಮಾಡಿರುವವರು ಟಾಲಿವುಡ್‍ನ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್. ಈ ಹಿಂದೆ ರಾಜಕುಮಾರ ಚಿತ್ರದಲ್ಲಿ ಅಪ್ಪು ಡ್ಯಾನ್ಸ್ ಹಾಡಿಗೆ ನೃತ್ಯ ಸಂಯೋಜನೆ ಮಾಡೋ ಮೂಲಕ ಪುನೀತ್ ಅಭಿಮಾನಿಗಳನ್ನು ಖುಷಿಪಡಿಸಿದ್ದ ಜಾನಿ ಮಾಸ್ಟರ್ ಈ ಚಿತ್ರದಲ್ಲಿಯೂ ಅಂಥಾದ್ದೇ ಕಮಾಲ್ ಸೃಷ್ಟಿಸೋ ಇರಾದೆಯೊಂದಿಗೇ ನೃತ್ಯ ಸಂಯೋಜನೆ ಮಾಡಿದ್ದಾರಂತೆ.

ಪವನ್ ಒಡೆಯರ್ ಈ ಹಾಡಿಗೆಂದೇ ಭಾರೀ ರಿಸ್ಕು ತೆಗೆದುಕೊಂಡಿದ್ದಾರೆ. ಹಲವಾರು ಸಲ ಬದಲಾವಣೆ ಮಾಡುತ್ತಲೇ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಿಸಿ ಅದರಲ್ಲಿಯೇ ಇಡೀ ಹಾಡಿನ ಚಿತ್ರೀಕರಣವನ್ನು ಮಾಡಿ ಮುಗಿಸಿದ್ದಾರೆ. ಪುನೀತ್ ಚಿತ್ರವೆಂದ ಮೇಲೆ ಪ್ರೇಕ್ಷಕರು ಹೊಸಾ ಥರದ ನೃತ್ಯವನ್ನೂ ಅಪೇಕ್ಷಿಸುತ್ತಾರೆ. ಅಭಿಮಾನಿಗಳೂ ಕೂಡಾ ಅದಕ್ಕಾಗಿ ಕಾತರರಾಗಿರುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡೇ ಈ ಹಾಡನ್ನು ರೂಪಿಸಲಾಗಿದೆಯಂತೆ.

ಭಟ್ಟರು ಬರೆದಿರೋ ಈ ವಿಶೇಷವಾದ ಈ ಹಾಡು ಟ್ರೆಂಡ್ ಸೆಟ್ ಮಾಡೋದರ ಜೊತೆಗೆ ಜಾನಿ ಮಾಸ್ಟರ್ ಸಾರಥ್ಯದಲ್ಲಿ ಪುನೀತ್ ಹಾಕಿರೋ ಸ್ಟೆಪ್ಸಿಗೆ ಅಭಿಮಾನಿ ವಲಯವೂ ಫಿದಾ ಆಗಲಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ!

Comments are closed.