ರಾಷ್ಟ್ರೀಯ

ಶಿಕ್ಷಕರಿಂದ ಶಾಲೆಯಲ್ಲಿ ಬಟ್ಟೆ ಬಿಚ್ಚುವ ಶಿಕ್ಷೆ: 88 ವಿದ್ಯಾರ್ಥಿನಿಯರಿಗೆ ಪರಿಹಾರ

Pinterest LinkedIn Tumblr


ಹೊಸದಿಲ್ಲಿ : ಕಳೆದ ವರ್ಷ ಶಿಕ್ಷಕರಿಂದ ಶಾಲೆಯಲ್ಲಿ ಶಿಕ್ಷೆಯ ರೂಪದಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚುವ ಅಮಾನವೀಯ ಶಿಕ್ಷೆಗೆ ಗುರಿಯಾಗಿದ್ದ 88 ಶಾಲಾ ಬಾಲಕಿಯರಿಗೆ ತಲಾ 5,000 ರೂ. ನಗದು ಪರಿಹಾರ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಅರುಣಾಚಲ ಪ್ರದೇಶ ಸರಕಾರಕ್ಕೆ ಆದೇಶಿಸಿದೆ.

ಕಳೆದ ವರ್ಷ ನವೆಂಬರ್‌ 23ರಂದು ಪಾಪಂ ಪಾರೆ ಜಿಲ್ಲೆಯ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದ 6 ಮತ್ತು 7ನೇ ತರಗತಿಯ 88 ವಿದ್ಯಾರ್ಥಿನಿಯರು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರ ನಿಂದಿಸುವ ಅಶ್ಲೀಲ ಪದಗಳನ್ನು ಕಾಗದದ ತುಂಡೊಂದರಲ್ಲಿ ಬರೆದಿದ್ದರು ಎನ್ನಲಾಗಿತ್ತು. ಆದರೆ ವಿದ್ಯಾರ್ಥಿನಿಯರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದರು. ಹಾಗಿದ್ದರೂ ಈ “ಅಪರಾಧ’ಕ್ಕಾಗಿ ಆ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಬಲವಂತದಿಂದ “ಬಟ್ಟೆ ಬಿಚ್ಚುವ’ ಅಮಾನವೀಯ ಶಿಕ್ಷೆಯನ್ನು ನೀಡಲಾಗಿತ್ತು.

ಈ ಘಟನೆ ಕುರಿತ ವರದಿಯನ್ನು ಸ್ವಪ್ರೇರಣೆಯಿಂದ ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಅರುಣಾಚಲ ಪ್ರದೇಶ ಸರಕಾರಕ್ಕೆ ಮತ್ತು ಕೇಂದ್ರ ಮಾನವ ಅಭಿವೃದ್ಧಿ ಸಚಿವಾಲಯಕ್ಕೆ ನೊಟೀಸ್‌ ಜಾರಿ ಮಾಡಿತ್ತು.

ತರಗತಿಯಲ್ಲಿ ಬಟ್ಟೆ ಬಿಚ್ಚುವ ಅಮಾನವೀಯ ಶಿಕ್ಷೆಗೆ ಗುರಿಯಾಗಿದ್ದ 88 ವಿದ್ಯಾರ್ಥಿನಿಯರಿಗೆ ತಲಾ 5,000 ರೂ. ಪರಿಹಾರ ಪಾವತಿಸಿರುವ ಸಾಕ್ಷ್ಯವನ್ನು ಮತ್ತು ಬದ್ದತೆ ಕಾಯ್ದ ವರದಿಯನ್ನು ನಾಲ್ಕು ವಾರಗಳಿಗೆ ತನಗೆ ಸಲ್ಲಿಸತಕ್ಕದ್ದು ಎಂದು ಎನ್‌ಎಚ್‌ಆರ್‌ಸಿ ಅರುಣಾಚಲ ಪ್ರದೇಶ ಸರಕಾರಕ್ಕೆ ಆದೇಶಿಸಿದೆ.

Comments are closed.