ಕರ್ನಾಟಕ

34 ಟಿಎಂಸಿ ನೀರು ಬಿಡಲು ಕರ್ನಾಟಕ ವಿರೋಧ: ಯಾವುದೇ ತೀರ್ಮಾನಕ್ಕೆ ಬರದೆ ಪ್ರಾಧಿಕಾರದ ಮೊದಲ ಸಭೆ ಅಂತ್ಯ

Pinterest LinkedIn Tumblr


ಬೆಂಗಳೂರು,(ಜು.02): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ಅಂತ್ಯಗೊಂಡಿದ್ದು, ಜುಲೈ ತಿಂಗಳಲ್ಲಿ 34 ಟಿಎಂಸಿ ನೀರು ಬಿಡುವಂತೆ ಮನವಿ ಮಾಡಿದ ತಮಿಳುನಾಡು ಪ್ರಸ್ತಾಪಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ.

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಹಮತ ಮೂಡದ ಹಿನ್ನೆಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಅಪೂರ್ಣಗೊಂಡಿದೆ. ನೀರು ಬಿಡುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಭೆ ವಿಫಲವಾಗಿದೆ. ಪ್ರಾಧಿಕಾರದ ಚೊಚ್ಚಲ ಸಭೆಯಲ್ಲಿ ನೀರಿನ ಹಂಚಿಕೆ ಬಗ್ಗೆ ತೀವ್ರ ಚರ್ಚೆಯಾಗಿದೆ.

ಜುಲೈ ತಿಂಗಳಲ್ಲಿ 34 ಟಿಎಂಸಿ ನೀರು ಬಿಡುವಂತೆ ಸಭೆಯಲ್ಲಿ ತಮಿಳುನಾಡು ಮನವಿ ಮಾಡಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕ ತಮಿಳುನಾಡಿಗೆ 34 ಟಿಎಂಸಿ ನೀರು ಬಿಡಬೇಕು. ಆದರೆ ಕರ್ನಾಟಕದ ಡ್ಯಾಂಗಳಲ್ಲಿ ನಿರೀಕ್ಷಿತ ನೀರಿನ ಶೇಖರಣೆ ಇಲ್ಲ ಎಂದು ಕರ್ನಾಟಕ ತಮಿಳುನಾಡು ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ, ಜುಲೈ ತಿಂಗಳಲ್ಲಿ 34 ಟಿಎಂಸಿ ನೀರು ಕೊಡಲು ಸಾಧ್ಯವಿಲ್ಲ ಎಂದಿದೆ.

ಈ ಬಗ್ಗೆ ಕೇಂದ್ರ ಜಲಮಂಡಳಿ ಪ್ರಾಧಿಕಾರದ ಮುಖ್ಯಸ್ಥ ಎಸ್​. ಮಸೂದ್​ ಹುಸೇನ್ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ವಿವಾದದ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿದ್ದೇವೆ. ಕಾವೇರಿ ಕೊಳ್ಳದ ನೀರಿನ ಪ್ರಮಾಣದ ಬಗ್ಗೆ ಚರ್ಚಿಸಿದ್ದೇವೆ. ಕಾವೇರಿ ಒಳ ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದಿದ್ದೇವೆ. ಜೂನ್​ ತಿಂಗಳಲ್ಲಿ ಕಾವೇರಿ ನೀರಿನ ಪ್ರಮಾಣ ಎಷ್ಟಿತ್ತು. ಜುಲೈ ತಿಂಗಳಲ್ಲಿ ನೀರು ಹಂಚಿಕೆ ಎಷ್ಟು ಆಗಬೇಕು. ಈವರೆಗೆ ಎಷ್ಟು ನೀರು ಹಂಚಿಕೆ ಮಾಡಲಾಗಿದೆ ಎಂದು ಚರ್ಚಿಸಲಾಗಿದೆ. ಜುಲೈ ತಿಂಗಳಲ್ಲಿ 34 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಮನವಿ ಮಾಡಿದೆ. ನೀರಿನ ಲಭ್ಯತೆ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Comments are closed.