ಕರ್ನಾಟಕ

ಸಮ್ಮಿಶ್ರ ಸರಕಾರಕ್ಕೆ 5 ವರ್ಷ ಸಹಕರಿಸಲು ಕಾಂಗ್ರೆಸ್ ಹೈಕಮಾಂಡ್‌ ಆದೇಶ: ಮುನಿಯಪ್ಪ

Pinterest LinkedIn Tumblr


ಹೊಸದಿಲ್ಲಿ : ಕುಮಾರಸ್ವಾಮಿ ಸರಕಾರಕ್ಕೆ ಐದು ವರ್ಷಕ್ಕೆ ಬೆಂಬಲಿಸಿದ್ದರಿಂದ ಸರಕಾರಕ್ಕೆ ಅಡ್ಡಗಾಲು ಹಾಕದೇ ಸಹಕರಿಸುವಂತೆ ಎಲ್ಲ ಮುಖಂಡರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಆದೇಶಿಸಿದೆ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ,”ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಹೀಗಾಗಿ ರಾಷ್ಟ್ರಹಿತ ಗಮನಿಸಿ ಜಾತ್ಯತೀತ ಮೌಲ್ಯಗಳ ರಕ್ಷಣೆಗಾಗಿ ಜೆಡಿಎಸ್‌ಗೆ ಬೆಂಬಲ ನೀಡಲಾಗಿದೆ. ಈ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕೆಂಬುದು ರಾಷ್ಟ್ರೀಯ ನಾಯಕರ ಆದೇಶ,” ಎಂದು ವಿವರಿಸಿದರು.

ಪೂರ್ಣ ಪ್ರಮಾಣದ ಬಜೆಟ್‌ ವಿಚಾರದಲ್ಲಿ ಸಿದ್ದರಾಮಯ್ಯ ತಳೆದ ನಿಲುವು ಕುರಿತ ಪ್ರಶ್ನೆಗೆ, ”ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿಹೆಚ್ಚು ಬಜೆಟ್‌ ಮಂಡಿಸಿದ ಅನುಭವ ಹೊಂದಿದ್ದಾರೆ. ಅವರು ಕೆಲವು ಸಲಹೆಗಳನ್ನು ನೀಡಿದರೆ ಅದನ್ನು ಭಿನ್ನಾಭಿಪ್ರಾಯ ಅಥವಾ ಮುನಿಸು ಎಂದು ತಿಳಿಯಬಾರದು. ಎಲ್ಲವನ್ನೂ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಮುನ್ನಡೆಯಬೇಕು ಎಂಬುದಷ್ಟೇ ಅವರ ಸಲಹೆಯಾಗಿದೆ. ಇದರಲ್ಲಿ ತಪ್ಪೇನೂ ಇಲ್ಲ. ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಸಾಲ ಮನ್ನಾ ನಿರ್ಧಾರಕ್ಕೆ ಕಾಂಗ್ರೆಸ್‌ ಪಕ್ಷದ ಸಂಪೂರ್ಣ ಬೆಂಬಲವಿದೆ,”ಎಂದರು.

ಜಗಜೀವನರಾಮ್‌ ನಂತರ ನಾನೇ ಹೆಚ್ಚು ಬಾರಿ ಆಯ್ಕೆ

ಕೆಪಿಸಿಸಿ ಅಧ್ಯಕ್ಷರ ನೇಮಕದ ಪ್ರಶ್ನೆಗೆ, ”ದಲಿತ ಸಮುದಾಯ ಕಳೆದ 70 ವರ್ಷಗಳಿಂದ ಕಣ್ಮುಚ್ಚಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತ ಬಂದಿದೆ. ಆದರೆ, ದಲಿತರಲ್ಲಿ ಎಡಗೈ ಪಂಗಡಕ್ಕೆ ಈವರೆಗೆ ಅಧ್ಯಕ್ಷ ಸ್ಥಾನ ನೀಡಿಲ್ಲ. ದೇಶದಲ್ಲಿ ಬಾಬು ಜಗಜೀವನರಾಮ್‌ ನಂತರ ಅತಿಹೆಚ್ಚು ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿರುವ ನನ್ನನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಅನೇಕರು ಕೇಳುತ್ತಿದ್ದಾರೆ. ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ” ಹೇಳಿದರು.

Comments are closed.