
ಮಘರ್ (ಉ.ಪ್ರ): ಕ್ಷುಲ್ಲಕ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಕೆಲವರು ಸಮಾಜವಾದ ಮತ್ತು ಬಹುಜನರ ಹೆಸರಲ್ಲಿ ಕೇವಲ ವೈಯಕ್ತಿಕ ಹಿತಾಸಕ್ತಿಗಳನ್ನು ಗಮನದಲ್ಲಿ ರಿಸಿಕೊಂಡೇ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಸಂತ ಕಬೀರ್ನಗರ ಜಿಲ್ಲೆಯ ಮಘರ್ನಲ್ಲಿ ಗುರುವಾರ 15ನೇ ಶತಮಾನದ ಪ್ರಮುಖ ಕವಿ ಸಂತ ಕಬೀರ್ ಸಮಾಧಿ ಸ್ಥಳದಲ್ಲಿ ಅವರಿಗೆ ಗೌರವ ಅರ್ಪಿಸಿ, ಬಳಿಕ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಮೋದಿ ವಸ್ತುಶಃ ಚುನಾವಣಾ ಪ್ರಚಾರವನ್ನೂ ಇದೇ ಸಂದರ್ಭದಲ್ಲಿ ಆರಂಭಿಸಿದ್ದಾರೆ.
“ಕೆಲವೊಂದು ವಿಪಕ್ಷಗಳು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಸಮಾಜ ಒಡೆದು ಅದರಿಂದ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿವೆ. ಕೆಲವು ಪಕ್ಷಗಳು ಸಮಾಜವಾದ ಮತ್ತು ಬಹುಜನ ಎನ್ನುವ ಮೂಲಕ ಕೇವಲ ವೈಯಕ್ತಿಕ ಲಾಭಗಳತ್ತ ಮಾತ್ರ ಗಮನಿಸುತ್ತಿವೆ. ತುರ್ತು ಪರಿಸ್ಥಿತಿ ಜಾರಿ ಮಾಡಿದವರು ಮತ್ತು ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಈಗ ಮೈತ್ರಿಗಾಗಿ ಮುಂದಾಗುತ್ತಿದ್ದಾರೆ’ ಎಂದು ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಅನ್ನು ಗುರಿಯಾಗಿರಿಸಿಕೊಂಡು ಪ್ರಧಾನಿ ವಾಗ್ಧಾಳಿ ನಡೆಸಿದ್ದಾರೆ. ಇದೇ ವೇಳೆ, ಸಂತ ಕಬೀರರು ಜಾತಿಗಳನ್ನು ನಂಬಲಿಲ್ಲ, ಬದಲಿಗೆ ಎಲ್ಲರನ್ನೂ ಸಮಾನವಾಗಿ ಕಂಡರು. ನವಭಾರತ ನಿರ್ಮಾಣದಲ್ಲಿ ನಾವೂ ಕಬೀರರ ಸಂದೇಶವನ್ನು ಅನುಸರಿಸುತ್ತೇವೆ ಎಂದೂ ಮೋದಿ ಹೇಳಿದ್ದಾರೆ.
ಕ್ಯಾಪ್ ಧರಿಸಲು ಒಪ್ಪದ ಸಿಎಂ: ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಅವರು ಸಂತ ಕಬೀರ್ ಅವರ ಸಮಾಧಿ ಸ್ಥಳದಲ್ಲಿ ನೀಡಲಾಗಿರುವ ಟೋಪಿ ಧರಿಸಲು ಒಪ್ಪಲಿಲ್ಲ. “ಈ ಸ್ಥಳದ ಸಂಪ್ರದಾಯದ ಪ್ರಕಾರ ಮುಖ್ಯಮಂತ್ರಿಯವರಿಗೆ ಧರಿಸಲು ಟೋಪಿ ನೀಡಿದೆ. ಆದರೆ ಅವರು ಅದನ್ನು ಧರಿಸಲು ಒಪ್ಪಲಿಲ್ಲ’ ಎಂದು ಸಮಾಧಿ ಸ್ಥಳದ ಉಸ್ತುವಾರಿ ಖಾದಿಮ್ ಹುಸೇನ್ ಹೇಳಿದ್ದಾರೆ.
ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿ ಸಂತ ಕಬೀರ್ರ ಬೋಧನೆಗಳನ್ನು ಪ್ರಸ್ತಾವ ಮಾಡುತ್ತಿದ್ದಾರೆ. ಸಂತ ಕಬೀರ್ ಜನ ಮಾನಸದಲ್ಲಿದ್ದಾರೆ. ಇಂಥ ಕ್ಷುಲ್ಲಕ ಕೆಲಸ ಮಾಡುವುದನ್ನು ಬಿಜೆಪಿ ಬಿಡಬೇಕು.
ಮಾಯಾವತಿ, ಬಿಎಸ್ಪಿ ನಾಯಕಿ
Comments are closed.