ಕರ್ನಾಟಕ

ಹೈ ಬೀಮ್‌ ಲೈಟ್‌ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಿರುವುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ

Pinterest LinkedIn Tumblr


ಬೆಂಗಳೂರು: ರಸ್ತೆಯಲ್ಲಿ ಸಂಚರಿಸುವ ವೇಳೆ ಏಕಾಏಕಿ ಹೈ ಬೀಮ್‌ ಲೈಟ್‌ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ಮೂವರ ಮೇಲೆ ಹಲ್ಲೆ ನಡೆಸಿರುವ ಘಟನೆ ಎಚ್‌ಎಎಲ್‌ ಸಮೀಪದ ಚಲ್ಲಘಟ್ಟ ಮುಖ್ಯರಸ್ತೆಯಲ್ಲಿ ಶನಿವಾರ ನಡೆದಿದೆ.

ಹಲ್ಲೆಗೊಳಗಾದ ಸರ್ಜಾಪುರ ಮುಖ್ಯರಸ್ತೆ ನಿವಾಸಿ ಅನಿಂದಂ(29) ಎಂಬುವರು ಜೀವನಬಿಮಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅನಿಂದಂ, ಜೂ.16ರಂದ ರಾತ್ರಿ 10.30ರ ಸುಮಾರಿಗೆ ಸ್ನೇಹಿತರಾದ ಅಮಿತ್‌ ಮತ್ತು ಬಿಸೈ ಎಂಬುವರ ಜತೆ ಕಾರಿನಲ್ಲಿ ಚಲ್ಲಘಟ್ಟ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದರು. ಎಚ್‌ಎಎಲ್‌ ಬಳಿ ಕತ್ತಲೆಯಲ್ಲಿ ರಸ್ತೆಯ ಎಡ ಬದಿಯಲ್ಲಿ ಕಾರೊಂದು ಲೈಟ್‌ ಆನ್‌ ಮಾಡಿಕೊಂಡು ನಿಂತಿತ್ತು. ಹೀಗಾಗಿ, ಬೇರೆ ಕಾರುಗಳು ಬರುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅನಿಂದಂ, ತಮ್ಮ ಕಾರಿನ ಲೈಟ್‌ಗಳನ್ನು ಡಿಮ್‌ ಆ್ಯಂಡ್‌ ಡಿಪ್‌ ಮಾಡಿದ್ದಾರೆ. ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಇಂಡಿಕಾ ಕಾರಿನಲ್ಲಿದ್ದವರು ಲೈಟ್‌ ಆಫ್‌ ಮಾಡಿ ನಂತರ ಏಕಾಏಕಿ ಹೈ ಬೀಮ್‌ ಲೈಟ್‌ ಹಾಕಿದ್ದಾರೆ. ಇದರಿಂದಾಗಿ ರಸ್ತೆ ಸರಿಯಾಗಿ ಕಾಣದೆ ಚಾಲನೆಗೆ ಅಡ್ಡಿ ಉಂಟಾಗಿದೆ.

ಹೀಗಾಗಿ, ಇಂಡಿಕಾ ಕಾರಿನ ಬಳಿ ಪಾಸ್‌ ಆಗುವಾಗ, ‘ಏಕಾಏಕಿ ಏಕೆ ಹೈ ಬೀಮ್‌ ಲೈಟ್‌ ಏಕೆ ಹಾಕಿದ್ದಿರಿ ಎಂದು’ ಅನಿಂದಂ ಪ್ರಶ್ನೆ ಮಾಡಿ ಸ್ಥಳದಿಂದ ಹೊರಟು ಹೋಗಿದ್ದಾರೆ. ಅಷ್ಟಕ್ಕೆ ಕಾರಿನಲ್ಲಿದ್ದ ದುಷ್ಕರ್ಮಿಗಳು, ಅನಿಂದಂ ಅವರ ಕಾರನ್ನು ಹಿಂಬಾಲಿಸಿಕೊಂಡು ವೇಗವಾಗಿ ಬಂದಿದ್ದಾರೆ. ಅಪಾಯದ ಅರಿವಾಗಿ ವೇಗವಾಗಿ ಕಾರು ಚಲಾಯಿಸಿದ ಅನಿಂದಂ ಸಮೀಪದ ಎಂಬೆಸ್ಸಿ ಗಾಲ್ಫ್‌ ಲಿಂಕ್‌ (ಇಜಿಎಲ್‌) ಪಾರ್ಕ್‌ ಸಮೀಪದ ಸೆಕ್ಯುರಿಟಿ ಗಾರ್ಡ್‌ಗಳು ಇರುವ ಸ್ಥಳಕ್ಕೆ ಹೋಗಲು ಮುಂದಾಗಿದ್ದಾರೆ. ಅಷ್ಟರಲ್ಲೇ ಎದುರುಗಡೆಯಿಂದ ಮತ್ತೊಂದು ಕಾರ್‌ ಬಂದ ಕಾರಣ ಅನಿವಾರ್ಯವಾಗಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಹಿಂಬಾಲಿಸಿಕೊಂಡು ಇಂಡಿಕಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೆಳಗಿಳಿದು ಏಕಾಏಕಿ ಅನಿಂದಂ ಅವರ ಕಾರಿನ ಬಾಗಿಲು ತೆಗೆದು ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಲು ಆರಂಭಿಸಿದ್ದಾರೆ. ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಅಮಿತ್‌ ಹಾಗೂ ಬಿಸೈ ಎಂಬುವರು ಕೆಳಗಿಳಿದಾಗ ಅವರನ್ನು ನಿಂದಿಸಿ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ್ದಾರೆ. ಸ್ಥಳದಿಂದ ಹೊರಡುವ ವೇಳೆ ಅನಿಂದಂ ಅವರ ಕಾರಿಗೆ ತಮ್ಮ ಕಾರನ್ನು ತಾಗಿಸಿ ಮಿರರ್‌ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ.

ಗಾಯಗೊಂಡ ಮೂವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವನಬೀಮಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು ಕಾರಿನಲ್ಲಿ ಮದ್ಯಪಾನ ಮಾಡಿಕೊಂಡು ಕುಳಿತಿದ್ದು, ಹಲ್ಲೆ ನಡೆಸುವ ವೇಳೆ ಕೆಲವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ಅನಿಂದಂ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments are closed.