ಕರ್ನಾಟಕ

ನೈಸ್‌ ರಸ್ತೆಯ ಕನಕಪುರ ಟೋಲ್‌ ಬಳಿ ಆನೆ ಸಂಚಾರ !

Pinterest LinkedIn Tumblr


ಬನ್ನೇರುಘಟ್ಟ: ನೈಸ್‌ ರಸ್ತೆಯಲ್ಲಿ ಕನಕಪುರ ಟೋಲ್‌ ಬಳಿ ಗುರುವಾರ ತಡರಾತ್ರಿ ಕಾಡಾನೆæಗಳು ಕಾಣಿಸಿಕೊಂಡಿವೆ. ಬಳಿಕ ಸಮೀಪದ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದು ಕಂಡು ಬಂದಿದೆ.

ರಾತ್ರಿ ವೇಳೆ ಮೂರು ಆನೆಗಳು ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಕನಕಪುರ ಟೋಲ್‌ ಸಿಬ್ಬಂದಿ ನೋಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟೋಲ್‌ ಆಫೀಸರ್‌ ಮಣಿ ” ಆರಂಭದಲ್ಲಿ ಆನೆಗಳು ಬಂದಿದ್ದು ನಮಗೆ ಗೊತ್ತಾಗಲಿಲ್ಲ. ಬೈಕ್‌ ಸವಾರರೊಬ್ಬರು ಆನೆಗಳು ರಸ್ತೆಗೆ ಬಂದಿವೆ ಎಂದು ಹೇಳಿದಾಗ ನಾವು ರಸ್ತೆಗೆ ಬಂದು ನೋಡಿದೆವು. ಟೋಲ್‌ನಿಂದ ಅರ್ಧ ಕಿಲೋಮೀಟರ್‌ ದೂರದಲ್ಲಿ ಟೋಲ್‌ನ ದಿಕ್ಕಿನಲ್ಲೇ ಬರುತ್ತಿದ್ದವು. ಅದನ್ನು ನೋಡಿ ನಮಗೂ ಆತಂಕ ಶುರುವಾಯಿತು. ಆನೆಗಳು ಹತ್ತಿರ ಬಂದಂತೆ ನನಗೆ ಭಯ ಆಯಿತು. ವಾಹನಗಳ ಲೈಟ್‌ ಬೆಳಕಿಗೆ ಮತ್ತು ಶಬ್ದಕ್ಕೆ ಆನೆಗಳು ಭಯಗೊಂಡು ಸಮೀಪದ ತೋಟದತ್ತ ತೆರಳಿದವು. ಆ ಬಳಿಕವಷ್ಟೇ ನಾವು ಸ್ವಲ್ಪ ಸಮಾಧಾನಗೊಳ್ಳುವಂತೆ ಆಯಿತು,” ಎಂದು ಅವರು ಹೇಳಿದರು.

ನರ್ಸರಿಗೆ ನುಗ್ಗಿ ದಾಂಧಲೆ :

ಕನಕಪುರ ಟೋಲ್‌ ಬಳಿ ಕಾಣಿಸಿಕೊಂಡ ಆನೆಗಳು ಬಳಿಕ ನೈಸ್‌ ಲಿಮಿಟೆಡ್‌ಗೆ ಸೇರಿದ ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿರುವ ನರ್ಸರಿ ಹಾಗೂ ಖಾಸಗಿಯವರ ನರ್ಸರಿಗೆ ನುಗ್ಗಿ ದಾಂಧಲೆ ಮಾಡಿವೆ. ಈ ಕುರಿತು ಮಾತನಾಡಿದ ಸಿದ್ದಯ್ಯ ಗಾರ್ಡನ್‌ ಸೂಪರ್‌ವೈಸರ್‌ ”ಮೂರು ಆನೆಗಳು ಬಂದು ಹಾನಿ ಮಾಡಿವೆ. ನಮ್ಮ ನರ್ಸರಿಯ ಬಾಳೆ ಗಿಡ , ಅಲಂಕಾರಿಕ ಗಿಡಗಳು ಸೇರಿ 200 ಗಿಡಗಳನ್ನು ತುಳಿದು ನಾಶಮಾಡಿವೆ,” ಎಂದರು.

ಲಿಂಗಣ್ಣ ಗಾರ್ಡನ್‌ ಕೂಲಿ ಈ ಕುರಿತು ಮಾತನಾಡಿ ”ಆನೆಗಳನ್ನು ನೋಡಿ ಭಯಭೀತರಾಗಿದ್ದೆವು. ಮುಳ್ಳು ತಂತಿಯನ್ನು ಆನೆಗಳು ಮುರಿದು ಹಾಕಿವೆ. ಈ ಪ್ರದೇಶದ ಸುತ್ತ ಕಾಡು ಪ್ರದೇಶವಾಗಿರುವುದರಿಂದ ಯಾವಾಗ ಪ್ರಾಣಿಗಳು ಬಂದು ದಾಳಿ ಮಾಡುತ್ತವೆ ಎಂಬುದನ್ನು ಊಹಿಸುವಂತಿಲ್ಲ. ಭಯದಲ್ಲೇ ಕೆಲಸ ಮಾಡುವ ಪರಿಸ್ಥಿತಿ ಎಂದರು.

ಕಡಿವಾಣಕ್ಕೆ ಬೇಕಿದೆ ಕ್ರಮ

ನೈಸ್‌ ರಸ್ತೆಯಲ್ಲಿ ಮೊದಲೇ ವಾಹನಗಳು ಅತಿ ವೇಗದಲ್ಲಿ ಸಂಚರಿಸುತ್ತವೆ. ರಸ್ತೆಯಲ್ಲಿ ದಿಢೀರನೆ ಆನೆಗಳು ಎದುರಾದರೆ, ವಾಹನ ಸವಾರರು ಭಯಭೀತರಾಗುವ ಜತೆ ನಿಯಂತ್ರಣ ಕಳೆದುಕೊಂಡು ವಾಹನ ಅಪಘಾತಕ್ಕೀಡಾಗುವ ಸಾಧ್ಯತೆಯೂ ಇದೆ. ಆನೆಗಳು ರಸ್ತೆಯತ್ತ ಬಾರದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ.

Comments are closed.