ಕರ್ನಾಟಕ

ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯಗೆ ಹೊಸ ಜವಾಬ್ದಾರಿ

Pinterest LinkedIn Tumblr


ಬೆಂಗಳೂರು: ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌ನಿಂದ ರಮೇಶ್‌ಕುಮಾರ್‌ ಸ್ಪೀಕರ್‌ ಆಗಲಿದ್ದಾರೆ. ಜೆಡಿಎಸ್‌ಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡಲಾಗಿದೆ ಎಂದು ಎಐಸಿಸಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಸಂಪುಟ ರಚನೆ ಕುರಿತು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಸಹಿತ ಸಂಪುಟದ 34 ಸ್ಥಾನಗಳ ಪೈಕಿ 22 ಸ್ಥಾನ ಕಾಂಗ್ರೆಸ್‌ ಹಾಗೂ 12 ಸ್ಥಾನ ಜೆಡಿಎಸ್‌ಗೆ ಹಂಚಿಕೆಯಾಗಿದೆ. ನೂತನ ಸರ್ಕಾರದಲ್ಲಿ ಡಾ.ಜಿ.ಪರಮೇಶ್ವರ್‌ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ವಿಶ್ವಾಸಮತ ಸಾಬೀತಾದ ನಂತರ ಸ್ಪೀಕರ್‌, ಡೆಪ್ಯೂಟಿ ಸ್ಪೀಕರ್‌ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನಿಂದ ರಮೇಶ್‌ಕುಮಾರ್‌ ಸ್ಪೀಕರ್‌ ಆಗಲಿದ್ದಾರೆ. ಜೆಡಿಎಸ್‌ನವರು ಡೆಪ್ಯೂಟಿ ಸ್ಪೀಕರ್‌ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು. ಇದುವರೆಗೂ ಯಾರ್ಯಾರಿಗೆ ಖಾತೆ ಹಂಚಿಕೆ ಎಂಬುದು ಚರ್ಚೆ ನಡೆದಿಲ್ಲ. ಬಹುಮತ ಸಾಬೀತು ಆದ ನಂತರ ಮತ್ತೆ ನಾಯಕರು ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಸಮಾನ ಕಾರ್ಯಸೂಚಿಯಡಿ ಸಮ್ಮಿಶ್ರ ಸರ್ಕಾರ ಕಾರ್ಯ ನಿರ್ವಹಿಸಲಿದ್ದು, ಸಮನ್ವಯ ಸಮಿತಿಯನ್ನು ಒಂದೆರೆಡು ದಿನದಲ್ಲಿ ರಚನೆ ಮಾಡಲಿದ್ದೇವೆ. ಸಮನ್ವಯ ಸಮಿತಿಯ ಅಧ್ಯಕ್ಷರು ಯಾರು ಎಂಬುದನ್ನು ಮುಂದಿನ ಸಭೆಯಲ್ಲಿ ನಿರ್ಧರಿಸಲಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಸಚಿವರ ವಿಚಾರದಲ್ಲಿ ಎರಡೂ ಪಕ್ಷಗಳು ತಮ್ಮದೇ ಆದ ತೀರ್ಮಾನ ಕೈಗೊಳ್ಳಲಿವೆ. ಆ ವಿಚಾರದಲ್ಲಿ ಮಧ್ಯಪ್ರವೇಶವಿಲ್ಲ. ಕಾಂಗ್ರೆಸ್‌ ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಬಹುದು. ಅದೇ ರೀತಿ ಜೆಡಿಎಸ್‌ ಸಹ. ಆದರೆ, ಜಿಲ್ಲಾ ಮತ್ತು ಪ್ರಾದೇಶಿಕವಾರು ಪ್ರಾತಿನಿಧ್ಯ ಎರಡೂ ಪಕ್ಷಗಳಿಂದ ಒಂದೇ ಕಡೆ ಹೆಚ್ಚಾಗದಂತೆ ಜಾಗರೂಕತೆವಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಎಚ್‌ಡಿಕೆ ಪ್ರಮಾಣ ವಚನಕ್ಕೆ ರೆಸಾರ್ಟ್‌ನಿಂದ ಶಾಸಕರು
ದೇವನಹಳ್ಳಿ: ಆಪರೇಷನ್‌ ಕಮಲ ಭೀತಿ ಹಿನ್ನೆಲೆಯಲ್ಲಿ ನಂದಿಬೆಟ್ಟ ರಸ್ತೆಯ ಪ್ರಸ್ಟೀಜ್‌ ಗಾಲ್ಫ್ ಶೇರ್‌ ರೆಸಾರ್ಟ್‌ ನಲ್ಲಿರುವ ಜೆಡಿಎಸ್‌ ಶಾಸಕರು ಮಂಗಳ ವಾರವೂ ವಾಸ್ತವ್ಯ ಮುಂದುವರಿಸಿದ್ದಾರೆ. ಬುಧವಾರ ಇಲ್ಲಿಂದ ನೇರವಾಗಿ ವಿಧಾನಸೌಧ ಮುಂಭಾಗ ನಡೆಯಲಿರುವ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲಿದ್ದಾರೆ. ನಂತರ ಅಲ್ಲಿಂದ ವಾಪಸ್‌ ರೆಸಾರ್ಟ್‌ ಅಥವಾ ಗುರುವಾರ ವಿಶ್ವಾಸಮತ ಯಾಚನೆ ನಡೆದರೆ ಬೆಂಗಳೂರಿನ ಹೋಟೆಲ್‌ನಲ್ಲಿ ಉಳಿದು ಅಲ್ಲಿಂದ ವಿಧಾನಸಭೆಗೆ ತೆರಳಲಿ ದ್ದಾರೆಂದು ತಿಳಿದು ಬಂದಿದೆ. ರೆಸಾರ್ಟ್‌ನಲ್ಲಿ ಮುಕ್ತ ವಾತಾವರಣವಿದ್ದು ಶಾಸಕರ ಕುಟುಂಬದ ಸದಸ್ಯರು ಬರಲು ಅವಕಾಶ ಕಲ್ಪಿಸಲಾಗಿದೆ.

ಎರಡು ಡಿಸಿಎಂ ಹುದ್ದೆ ಸೃಷ್ಟಿಸಿ
ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು. ರಾಜ್ಯದ ದಕ್ಷಿಣ ಮತ್ತು ಉತ್ತರ ಭಾಗಕ್ಕೆ ಸಮಾನ ಹಂಚಿಕೆ ಮಾಡಬೇಕೆಂದು ಮಾಜಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದರಿಂದ ಯಾವುದೇ ತಾರತಮ್ಯ ಉಂಟಾಗುವುದಿಲ್ಲ. ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅಥವಾ ನನಗೆ ಯಾರಿಗೆ ಅವಕಾಶ ಕೊಟ್ಟರೂ ಸರಿ ಎಂದು ತಿಳಿಸಿದರು. ದಕ್ಷಿಣದಲ್ಲಿ ಡಾ.ಜಿ.ಪರಮೇಶ್ವರ್‌ ಅಥವಾ ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಿದರೆ, ಉತ್ತರದಲ್ಲೂ ಒಬ್ಬರಿಗೆ ಅವಕಾಶ ಮಾಡಿಕೊಡಲಿ ಎಂದು ಹೇಳಿದರು.

Comments are closed.