ಬೆಂಗಳೂರು: ಮಳೆಯ ಸಿಂಚನ, ಟ್ರಾಫಿಕ್ ಕಿರಿಕಿರಿಯ ನಡುವೆಯೂ ಕಿಕ್ಕಿರಿದು ತುಂಬಿದ್ದ ವಿಧಾನಸೌಧ ಸಮ್ಮುಖದಲ್ಲಿ ಎಚ್.ಡಿ. ಕುಮಾರಸ್ವಾಮಿ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು.
ದೇವರು ಮತ್ತು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು.
ಎರಡನೇ ಬಾರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಡಾ. ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ವಜೂಭಾಯಿ ವಾಲಾ ಇಬ್ಬರಿಗೂ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ಕುಮಾರಸ್ವಾಮಿ ಅವರು ತಾಯ ಇ ಚೆನ್ನಮ್ಮ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಾ.ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭಕ್ಕೆ ಸಾಕ್ಷಿಯಾಗಲು ದೇಶದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ತೃತೀಯ ರಂಗದ ನಾಯಕರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ ಆಗಮಿಸಿದ್ದರು.
ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರವನ್ನು ರಾಷ್ಟ್ರಮಟ್ಟದ ನಾಯಕರು ಖುದ್ದಾಗಿ ಕಣ್ತುಂಬಿಕೊಂಡರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಯಾದವ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸೀತಾರಾಮ್ ಯೆಚೂರಿ, ಪುದುಚೇರಿಯ ವಿ. ನಾರಾಯಣಸ್ವಾಮಿ, ಅಜಿತ್ ಸಿಂಗ್, ಜೈಪಾಲ್ ರೆಡ್ಡಿ, ಶರದ್ ಪವಾರ್, ಶರದ್ ಯಾದವ್, ಹೇಮಂತ್ ಸೊರೇನ್ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ನಾಯಕರು ಗೈರು ಹಾಜರಾಗಿದ್ದರು.
ಪ್ರಮಾಣವಚನ ಸಮಾರಂಭಕ್ಕೆ ಮೊದಲು ಕಾಂಗ್ರೆಸ್ ಶಾಸಕರನ್ನು ಭೇಟಿಯಾದ ಸೋನಿಯಾ ಗಾಂಧಿ, ಸಮಸ್ಯೆಗಳೇನಿದ್ದರೂ ತಮ್ಮ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ಶಾಸಕರಿಗೆ ಸೂಚಿಸಿದರು. ಸಮ್ಮಿಶ್ರ ಸರಕಾರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ ಎಂದೂ ಸೂಚನೆ ನೀಡಿದರು.
ಪ್ರಮಾಣ ವಚನ ಸ್ವೀಕಾರದ ನಂತರ ಉದ್ದೇಶಿತ ತೃತೀಯ ರಂಗದ ನಾಯಕರೆಲ್ಲರೂ ಒಟ್ಟಾಗಿ ಕ್ಯಾಮರಾಗೆ ಪೋಸು ನೀಡಿದರು.
ಪ್ರಮಾಣ ವಚನ ಸ್ವೀಕಾರ ನಂತರ ಉದ್ದೇಶಿತ ತೃತೀಯ ರಂಗದ ನಾಯಕರಿಗೆ ವಿಶೇಷ ಚಹಾ ಕೂಟ ಏರ್ಪಡಿಸಲಾಗಿತ್ತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಹಾ ಕೂಟ ಏರ್ಪಡಿಸಲಾಗಿತ್ತು.
ಪ್ರಮಾಣ ವಚನ ಸ್ವೀಕಾರ ನಂತರ ಕಾಂಗ್ರೆಸ್‌ನ ಎಲ್ಲ ಶಾಸಕರನ್ನು ಮತ್ತೆ ಹಿಲ್ಟನ್ ಹೋಟೆಲ್‌ಗೆ ಕರೆದೊಯ್ಯಲಾಯಿತು.
ರಾಜ್ಯಾದ್ಯಂತ ಜೆಡಿಎಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಕಾಂಗ್ರೆಸ್ ಪಾಳಯದಲ್ಲಿ ಆತಂಕ- ಅಸಮಾಧಾನ ಮಿಶ್ರಿತ ಭಾವನೆಯಿದೆ. ಬಿಜೆಪಿ ಇಂದು ಕರಾಳ ದಿನ ಆಚರಿಸುತ್ತಿದ್ದು, ಪಕ್ಷದ ನಾಯಕರು, ಕಾರ್ಯಕರ್ತರು ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Comments are closed.