ರಾಷ್ಟ್ರೀಯ

ಹಿಂದುಗಳ ಮೇಲೆ ಮುಸ್ಲಿಮರಿಂದ ದೌರ್ಜನ್ಯ: ಬಿಜೆಪಿ ರಾಜ್ಯಸಭಾ ಸಂಸದೆ ಕಾಂತಾ ಕರ್ದಮ್

Pinterest LinkedIn Tumblr


ಅಂಬೇಹತಾ ಪೀರ್ (ಸಹರಾನ್ಪುರ್): ಮುಸ್ಲಿಮರು ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದು, ಈ ಬಗ್ಗೆ ಹಿಂದೂ ಬಾಂಧವರು ಜಾಗರೂಕರಾಗಬೇಕಿದೆ ಎಂದು ಕರೆ ನೀಡುವ ಮೂಲಕ ಮೀರತ್‌ನ ಬಿಜೆಪಿ ರಾಜ್ಯಸಭಾ ಸಂಸದೆ ಕಾಂತಾ ಕರ್ದಮ್ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಸಹರಾನ್ಪುರ್ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ವೇದಿಕೆಯಲ್ಲಿದ್ದರು.

ಮತದಾರರು ದೊಡ್ಡ ಸಂಖ್ಯೆಯಲ್ಲಿ ಬಂದು ಕೈರಾನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೃಗಾಂಕ ಸಿಂಗ್‌ ಪರ ಮತ ಚಲಾಯಿಸುವಂತೆ ಮನವಿ ಮಾಡಿರುವ ಕಾಂತಾ, ‘ನೀವು ಯಾವುದೇ ರೀತಿಯ ಸಹಾಯಕ್ಕಾಗಿ ಮೃಗಾಂಕ್ ಸಿಂಗ್ ಬಳಿಯೇ ಹೋಗುತ್ತೀರ ಹೊರತು, ತಬಸ್ಸುಮ್ ಬಳಿ ಅಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ’ ಎಂದು ಅವರು ಹೇಳಿದ್ದಾರೆ.

ಮಹಾ ಮೈತ್ರಿಕೂಟದ ಅಭ್ಯರ್ಥಿ ತಬಸ್ಸುಮ್ ಹಸನ್ ಅವರು ಕೈರಾ ಕ್ಷೇತ್ರದ ಬಿಎಸ್‌ಪಿ ಶಾಸಕ ನಾಹೀದ್ ಹಸನ್ ಅವರ ತಾಯಿಯಾಗಿದ್ದಾರೆ.

ದಲಿತ ನಾಯಕಿ ಕಾಂತಾ ಕರ್ದಮ್ (53) ಅವರು ಕಳೆದ 28 ವರ್ಷಗಳಿಂದ ಬಿಜೆಪಿ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಕರ್ದಮ್ ಅವರು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ್ದ ಅವರು, ಸದ್ಯ ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ.

Comments are closed.