ಕರ್ನಾಟಕ

ಬಿಜೆಪಿಯಿಂದ ಪತ್ರಿಕಾಗೋಷ್ಠಿ: ಕಾಂಗ್ರೆಸ್‌- ಜೆಡಿಎಸ್‌ನದ್ದು ಭ್ರಷ್ಟಾಚಾರ ಮುಚ್ಚಿಹಾಕಲು ಮಾಡಿಕೊಂಡ ಶರಣಾಗತಿಯ ಒಡಂಬಡಿಕೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯು ಅವಕಾಶವಾದಿ ಮೈತ್ರಿಯಾಗಿದ್ದು, ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಮಾಡಿಕೊಂಡಿರುವ ಶರಣಾಗತಿಯ ಒಡಂಬಡಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಮಾರ್ಮಿಕವಾಗಿ ನುಡಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿ ಅಧಿಕಾರಕ್ಕಾಗಿ ಅಪ್ಪನಾಣೆ ಮಾಡಿದ್ದರು. ಇದೀಗ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಇದು ಸೈದ್ಧಾಂತಿಕವಾಗಿರದೆ ಅವಕಾಶವಾದಿ ಮೈತ್ರಿಯಾಗಿದೆ.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ ಭ್ರಷ್ಟಾಚಾರ ಬಯಲಿಗೆಳೆದು ನಾಯಕರನ್ನು ಜೈಲಿಗಟ್ಟುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಇದೀಗ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸದೆ ಕಡತಗಳನ್ನೇ ಮುಚ್ಚಿ ಹಾಕುವ ಸಂಬಂಧ ಎರಡು ಪಕ್ಷಗಳ ನಡುವೆ ಶರಣಾಗತಿ ಒಡಂಬಡಿಕೆಯಾಗಿದೆ ಎಂದು ದೂರಿದರು.

ಬಿ.ಎಸ್‌.ಯಡಿಯೂರಪ್ಪ ತಮ್ಮ ಭಾಷಣದ ಮೂಲಕ ಪ್ರಜಾಪ್ರಭುತ್ವದ ಗೌರವವನ್ನು ಎತ್ತಿ ಹಿಡಿಯುವ ಜತೆಗೆ ಜನರ ಮನ ಗೆದ್ದಿದ್ದಾರೆ. ಹಾಗಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೆಲ್ಲಾ ನಾಟಕವೆಂದಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌, ಬಿಜೆಪಿಯು ಶಾಸಕರ ಖರೀದಿಗೆ ಪ್ರಯತ್ನ ನಡೆಸಿತ್ತು ಎಂದು ಆರೋಪಿಸಿದ್ದಾರೆ. ಇವರ ಹೇಳಿಕೆಯು ಕೊತ್ವಾಲನನ್ನು ಕಳ್ಳನೇ ಗದರಿಸಿದಂತಿದೆ ಎಂದು ಲೇವಡಿ ಮಾಡಿದರು.

ಹಾಸ್ಯಾಸ್ಪದ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ರಾಜ್ಯದಲ್ಲಿ ಬಿಜೆಪಿ ಸೋತಿದ್ದು, ಕಾಂಗ್ರೆಸ್‌ ಗೆದ್ದಿದೆ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. 40 ಸ್ಥಾನದಲ್ಲಿದ್ದ ಬಿಜೆಪಿ 104 ಸ್ಥಾನಕ್ಕೇರಿದೆ. 122 ಸ್ಥಾನ ಪಡೆದಿದ್ದ ಕಾಂಗ್ರೆಸ್‌ 78ಕ್ಕೆ ಕುಸಿದಿದೆ. ಜೆಡಿಎಸ್‌ 40 ಸ್ಥಾನದಿಂದ 38ಕ್ಕೆ ಇಳಿದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕ್ಷೇತ್ರದಲ್ಲಿ ಸೋತು, ಮತ್ತೂಂದು ಕ್ಷೇತ್ರದಲ್ಲಿ ಒಂದೂವರೆ ಸಾವಿರ ಮತಗಳ ಅಂತರದಿಂದಷ್ಟೇ ಗೆಲುವು ಸಾಧಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ ಗೆದ್ದಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಹೇಳಿದರು.

ನಕಲಿ ಕಾಂಗ್ರೆಸ್‌: ನಕಲಿ ಮತದಾರರ ಗುರುತಿನ ಚೀಟಿ, ನಕಲಿ ಸಿಡಿ, ನಕಲಿ ಪ್ರಚಾರ ಹೀಗೆ ಕಾಂಗ್ರೆಸ್‌ನಲ್ಲಿ ಎಲ್ಲವೂ ನಕಲಿ. ಹಾಗಿದ್ದರೂ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುವುದು ಅರ್ಥಹೀನ. ಸಂಸತ್‌ ಅಧಿವೇಶನ ಸುಗಮವಾಗಿ ನಡೆಸಲು ಅವಕಾಶ ನೀಡದ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗಕ್ಕೆ ಪ್ರಸ್ತಾವ ಸಲ್ಲಿಸಿದ್ದು, ತುರ್ತು ಪರಿಸ್ಥಿತಿ ವೇಳೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಕಾಂಗ್ರೆಸ್‌ ಸಂಸ್ಕೃತಿ ಎಂದು ಕಿಡಿ ಕಾರಿದರು.

ಸೋತ ಕಡೆಯೆಲ್ಲಾ ಇವಿಎಂ ಬಗ್ಗೆ ಆಕ್ಷೇಪಿಸುವ ಕಾಂಗ್ರೆಸ್‌, ಫ‌ಲಿತಾಂಶ ತನಗೆ ಪೂರಕವಾಗಿದ್ದರೆ ಇವಿಎಂ ಕುರಿತು ಚಕಾರ ತೆಗೆಯುವುದಿಲ್ಲ. ದೇಶದ ಅತ್ಯುನ್ನತ ಸಂಸ್ಥೆಯಾದ ಮಹಾಲೇಖಪಾಲ ಸಂಸ್ಥೆ ಬಗ್ಗೆಯೂ ಕಾಂಗ್ರೆಸ್‌ ಆರೋಪ ಮಾಡುತ್ತದೆ. ಸೇನಾ ಪ್ರಮುಖರನ್ನು ಗೂಂಡಾ ಎನ್ನುವುದು ಕಾಂಗ್ರೆಸ್‌ ಸಂಸ್ಕೃತಿ ಎಂದರು.

ದೇಶದೆಲ್ಲೆಡೆ ಕಾಂಗ್ರೆಸ್‌ ಸೋಲುತ್ತಿದ್ದು, ಎರಡು ಪುಟ್ಟ ರಾಜ್ಯಗಳಿಗೆ ಸೀಮಿತವಾಗಿದೆ. ಆದರೂ ಸೋಲನ್ನು ವಿಜಯವಾಗಿ ಪರಿಭಾವಿಸುವುದು ಕಾಂಗ್ರೆಸ್‌ನ ದೌರ್ಬಲ್ಯ. ಕಾಂಗ್ರೆಸ್‌ಮುಕ್ತ ಎಂದರೆ ಭ್ರಷ್ಟಾಚಾರ ಮುಕ್ತ, ವಂಶಪಾರಂಪರ್ಯ ಮುಕ್ತ ಭಾರತ. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಉಪಾಧ್ಯಕ್ಷ ಬಿ.ಸೋಮಶೇಖರ್‌, ವಕ್ತಾರರಾದ ತೇಜಸ್ವಿನಿ ಗೌಡ, ಮಾಳವಿಕಾ ಅವಿನಾಶ್‌, ಸಹ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಉಪಸ್ಥಿತರಿದ್ದರು.

Comments are closed.