
ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು 15 ರೂಪಾಯಿ ಬೆಲೆಯ ಕ್ವಾರ್ಟರ್ ಬಾಟಲಿಯನ್ನು 25 ರೂಪಾಯಿಗೆ ಮಾರುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಜಿಲ್ಲೆಯ ಗಿಲ್ಲೆಸೊಗೂರಿನಲ್ಲಿ ನಡೆದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೀರು, ವಿದ್ಯುತ್ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ರಾಷ್ಟ್ರೀಯ ಪಕ್ಷಗಳು ನೆರವಿಗೆ ಬರುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಾಲಮನ್ನಾ ಸಾಧ್ಯವೇ ಇಲ್ಲ ಎಂದಿದ್ದಾರೆ. ರಾಜ್ಯ ಸರಕಾರ ರೈತರ ಸಾಲಮನ್ನಾ ಘೋಷಣೆ ಮಾಡಿದೆಯೇ ಹೊರತು, ಸಾಲಮನ್ನಾ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೇ.17ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಅವರಪ್ಪಣ ಆಣೆಗೂ ಎಚ್ಡಿಕೆ ಸಿಎಂ ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿದ್ದಾರೆ. ಆದರೆ, ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ, ರೈತರ ಸಾಲಮನ್ನಾ ಮಾಡುತ್ತೇನೆ. ಹೊಸ ಕೃಷಿ ನೀತಿಗಳನ್ನು ಜಾರಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಉಳಿಯಬೇಕಾದರೆ ಜೆಡಿಎಸ್ ಬೆಂಬಲ ನೀಡಿ ಎಂದು ಮನವಿ ಮಾಡಿದ ಕುಮಾರಸ್ವಾಮಿ, ತೆಲಂಗಾಣದಲ್ಲಿ ಟಿಎಸ್ಆರ್ ಸರಕಾರ ತಂದಿರುವ ಕುಡಿಯುವ ನೀರಿನ ಯೋಜನೆ ರಾಜ್ಯಕ್ಕೂ ತರುತ್ತೇನೆ ಎಂದರು. ಇನ್ನೂ ಮೇ 6ರಂದು ರಾಯಚೂರಿನಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಪ್ರಚಾರ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
Comments are closed.