ಕರ್ನಾಟಕ

ಬಿಎಂಟಿಸಿ ಆದಾಯಕ್ಕೆ ಕನ್ನ ಹಾಕಿದ ಖಾಸಗಿ ಅಕ್ರಮ ಸಾರಿಗೆ

Pinterest LinkedIn Tumblr


ಬೆಂಗಳೂರು: ನಗರವನ್ನು ಕೇಂದ್ರೀಕರಿಸಿ ಸಾರಿಗೆ ಸೇವೆ ನೀಡುತ್ತಿರುವ ಖಾಸಗಿ ಅಕ್ರಮ ಸಾರಿಗೆಗೆ ಸೇರಿದ ಬಸ್‌ ಮತ್ತು ಮ್ಯಾಕ್ಸಿಕ್ಯಾಬ್‌ಗಳು ಬಿಎಂಟಿಸಿ ಆದಾಯಕ್ಕೆ ದೊಡ್ಡ ಹೊಡೆತ ನೀಡುತ್ತಿವೆ. ವಿವಿಧ ಬಣ್ಣಗಳಿಂದ ತುಂಬಿದ, ಕರ್ಕಶ ಹಾರ್ನ್ ಮಾಡುವ ಮತ್ತು ದಟ್ಟ ಹೊಗೆಯುಗುಳುವ ಬಸ್‌ಗಳು ಅಡ್ಡಾದಿಡ್ಡಿ ಸಂಚರಿಸಿ ನಗರದಲ್ಲಿ ಇತರ ಸವಾರರಿಗೂ ಕಿರಿಕಿರಿ ಉಂಟುಮಾಡುತ್ತಿರುವುದು ಕಂಡುಬಂದಿದೆ.

ಬಿಎಂಟಿಸಿ ಸಂಚಾರ ಕಡಿಮೆ ಇರುವ, ಹೆಚ್ಚು ಜನರು ಪ್ರಯಾಣಿಸುವ ಸಿಲ್ಕ್‌ ಬೋರ್ಡ್, ಹೆಬ್ಬಾಳ, ಗೊರಗುಂಟೆಪಾಳ್ಯ, ನಾಯಂಡಹಳ್ಳಿ, ಬನಶಂಕರಿ, ಮಾರತ್ತಹಳ್ಳಿ, ಕಾಡುಗೋಡಿ, ಬೈಯಪ್ಪನಹಳ್ಳಿ ಮತ್ತು ಕೆ. ಆರ್‌. ಮಾರ್ಕೆಟ್‌ಗಳಿಗ ಖಾಸಗಿ ಬಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಸಂಚಾರ ಮಾಡುತ್ತಿದ್ದು, ಬಿಎಂಟಿಸಿಗೆ ಬರಬೇಕಾದ ಆದಾಯವನ್ನು ಸುಲಭದಲ್ಲಿ ಬಾಚಿಕೊಳ್ಳುತ್ತಿವೆ.

ಅಕ್ರಮವಾಗಿ ನಗರದಲ್ಲಿ ಸಂಚರಿಸುವ ಖಾಸಗಿ ಬಸ್‌ ಮತ್ತು ಮ್ಯಾಕ್ಸಿಕ್ಯಾಬ್‌ಗಳನ್ನು ಅಸಂಘಟಿತ ವಲಯದ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಗಾರ್ಮೆಂಟ್ಸ್‌ ನೌಕರರು ಹೆಚ್ಚಾಗಿ ಬಳಸುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರೂ, ಯಾವುದೇ ಪ್ರಯೋಜನಾಗಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.

ಕಡಿಮೆ ದರ, ಹೆಚ್ಚು ಸ್ಥಳಾವಕಾಶ ಮತ್ತು ಸೀಟುಗಳ ಲಭ್ಯತೆಯನ್ನು ಜನರು ಬಯಸುವುದರಿಂದ ಖಾಸಗಿ ಅಕ್ರಮ ಸಾರಿಗೆಗೆ ಹೆಚ್ಚು ಪ್ರಯೋಜನವಾಗಿದೆ. ಹೀಗಾಗಿ ಜನತೆ ಬಿಎಂಟಿಸಿ ತೊರೆದು ಖಾಸಗಿ ಬಸ್‌ ಹತ್ತುತ್ತಾರೆ. 2016-17ನೇ ಸಾಲಿನಲ್ಲಿ ಬಿಎಂಟಿಸಿ ಆದಾಯ 1,770 ಕೋಟಿ ರೂ.ಗೆ ಇಳಿಕೆಯಾಗಿದ್ದು, ಅದರ ಹಿಂದಿನ ವರ್ಷ 1,994 ಕೋಟಿ ರೂ. ಆದಾಯ ಗಳಿಸಿತ್ತು. 2017-18ನೇ ಸಾಲಿನ ಆದಾಯ ವಿವರವನ್ನು ಬಿಎಂಟಿಸಿ ಬಹಿರಂಗಪಡಿಸಿಲ್ಲ.

ನಿಯಮದ ಪ್ರಕಾರ ಕಾಂಟ್ರಾಕ್ಟ್‌ ಕ್ಯಾರಿಯೇಜ್ ಬಸ್‌ಗಳು ನಿರ್ದಿಷ್ಟ ಎರಡು ಸ್ಥಳಗಳನ್ನು ಹೊರತುಪಡಿಸಿ, ಮಧ್ಯೆ ಸ್ಟೇಜ್‌ಗಳಲ್ಲಿ ಜನರನ್ನು ಹತ್ತಿಸಿಕೊಳ್ಳುವಂತಿಲ್ಲ. ಆದರೆ ನಿಯಮವನ್ನು ಗಾಳಿಗೆ ತೂರಿರುವ ಖಾಸಗಿ ಬಸ್‌ಗಳು ಬಿಎಂಟಿಸಿ ನಿಗದಿಪಡಿಸಿರುವ ಪ್ರತಿ ಸ್ಟೇಜ್‌ನಲ್ಲಿ ಜನರನ್ನು ಹತ್ತಿಸಿಕೊಳ್ಳುತ್ತವೆ, ಇಳಿಸಿಕೊಳ್ಳುತ್ತವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್‌, ನಿಯತವಾಗಿ ಅಕ್ರಮ ಬಸ್‌ ಸಂಚಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದಾರೆ.

Comments are closed.