ಕರ್ನಾಟಕ

ನನ್ನ ಕುಟುಂಬ ಮುಗಿಸಲು ಏನು ಪಾಪ ಮಾಡಿದ್ದೀವಿ?

Pinterest LinkedIn Tumblr


ಹಾಸನ: “ದೇವೇಗೌಡ್ರು ಮತ್ತು ಅವರ ಮಕ್ಕಳನ್ನು ಮುಗಿಸಲೇ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಡುವುದಾದ್ರೆ ನಾವು ಯಾವ ಪಾಪ ಮಾಡಿದ್ದೇವೆ? ವ್ಯಕ್ತಿಗತ ದ್ವೇಷ ಮಾಡುವುದು ಒಬ್ಬ ಮುಖ್ಯಮಂತ್ರಿಗೆ ಶೋಭೆ ತರುತ್ತಾ’ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವೇನು ಸಿದ್ದರಾಮಯ್ಯ ಮತ್ತು ಅವರ ಮಕ್ಕಳನ್ನು ಮುಗಿಸಬೇಕು
ಎಂದು ಹೇಳಿದ್ದೇವೆಯೇ? ಸಿದ್ದರಾಮಯ್ಯನವರ ಹಿರಿಯ ಮಗ ನಿಧನರಾದಾಗ ಅವರ ಮನೆಗೆ ನಾನೇ ಹೋಗಿ ಸಾಂತ್ವನ ಹೇಳಿ ಬಂದಿದ್ದೆ. ಆದರೆ, ಅವರು ನನ್ನ ಮತ್ತು ನನ್ನ ಮಕ್ಕಳನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಹೇಳ್ತಾರೆ. ಇದು ಒಬ್ಬ ಸಿಎಂ ಕ್ಯಾಲಿಬರ್‌ ಎಂದು ವ್ಯಂಗ್ಯವಾಡಿದರು.

“ನನ್ನ ಮೊಮ್ಮಗ ಪ್ರಜ್ವಲ್‌ ಮಚ್ಚು, ಲಾಂಗು, ಗುರಾಣಿ ಹಿಡಿದುಕೊಂಡು ಬಂದಿದ್ದ ಎಂದು ಹೊಳೆನರಸೀಪುರದ ಕಾಂಗ್ರೆಸ್‌ ಅಭ್ಯರ್ಥಿ ಆರೋಪ ಮಾಡಿದ್ದನ್ನು ಕೇಳಿದ್ದೇನೆ. ಇಂಥ ಹೇಳಿಕೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಪ್ರಜ್ವಲ್‌ಗೆ ಹೇಳಿದ್ದೇನೆ. ಪ್ರಚೋದನೆಗೆ ಒಳಗಾಗಿ ಪ್ರತಿಕ್ರಿಯಿಸುವ ಕೀಳುಮಟ್ಟಕ್ಕೆ ಇಳಿಯಬಾರದು ಎಂದು ರೇವಣ್ಣಗೂ ಹೇಳಿದ್ದೇನೆ. ಪ್ರಚೋದನೆಗೆ ಒಳಗಾಗದೆ ಜನರ ಮುಂದೆ ಕೈಮುಗಿದುಕೊಂಡು ಹೋಗೋಣ ಎಂದೂ ಸೂಚಿಸಿದ್ದೇನೆ’ ಎಂದರು.

ಯಾರಿಂದಲೂ ಪ್ರಜ್ವಲ್‌ನನ್ನು ಕಡೆಗಣಿಸಲು ಸಾಧ್ಯವಿಲ್ಲ. ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಮಾಡಲು ಪ್ರಜ್ವಲ್‌ಗೆ ಹೇಳಿದ್ದೇನೆ ಎಂದರು.

“ಕೆ.ಆರ್‌.ನಗರದ ಜೆಡಿಎಸ್‌ ಅಭ್ಯರ್ಥಿಯ ವಿರುದಟಛಿ ನನ್ನ ಸೊಸೆ ಮಸಲತ್ತು ನಡೆಸಿದ್ದಾಳೆಂಬ ವಿಡಿಯೋ ವೈರಲ್‌ ಆಯ್ತು. ಅದು ಎಲ್ಲಿಂದ, ಹೇಗೆ ಬಂತು ಎಂಬುದು ನನಗೆ ಗೊತ್ತಿದೆ. ಒಬ್ಬ ವ್ಯಕ್ತಿಯ ವರ್ಚಸ್ಸು ಕಳೆಯಲು ಇಂಥ ಕೀಳು ಮಟ್ಟಕ್ಕೆ ಇಳಿಯಬೇಕೆ? 57 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇಂಥವನ್ನೆಲ್ಲಾ ನೋಡಿಲ್ಲವಾ?’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಅಭ್ಯರ್ಥಿಗೆ ಕುರಿ ನೀಡಿದ ಗ್ರಾಮಸ್ಥರು
ಯಲಬುರ್ಗಾ (ಕೊಪ್ಪಳ): ವಿಧಾನಸಭಾ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವೀರನಗೌಡ ಪೊಲೀಸ್‌ ಪಾಟೀಲ ಅವರ ಚುನಾವಣಾ ಖರ್ಚಿಗೆಂದು ಜಿ.ವೀರಾಪುರ ಗ್ರಾಮದ ಮೂವರು ಶನಿವಾರ 10 ಕುರಿಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಜಿ.ವೀರಾಪುರ ಗ್ರಾಮದ ಲಕ್ಷ್ಮವ್ವ ಸಾಹುಕಾರ,ಮರೇಗೌಡ ಪಾಟೀಲ, ಶರಣಪ್ಪ ಬಿಂಗಿ ಎಂಬುವರು 10 ಕುರಿ ನೀಡಿದ್ದು, ಕುರಿ ಮಾರಿ ಬಂದ ಹಣವನ್ನು ಚುನಾವಣೆ ಖರ್ಚಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.

-ಉದಯವಾಣಿ

Comments are closed.