ಕರ್ನಾಟಕ

ಬೆಂಗಳೂರಿನಲ್ಲಿ ತಡರಾತ್ರಿ ಕೇರಳಕ್ಕೆ ಹೊರಟ್ಟಿದ್ದ ಖಾಸಗಿ ಬಸ್ ಪ್ರಯಾಣಿಕರ ಸಮೇತ ಹೈಜಾಕ್!

Pinterest LinkedIn Tumblr

ಬೆಂಗಳೂರು: ಕೇರಳಕ್ಕೆ ಹೊರಟಿದ್ದ ಖಾಸಗಿ ಬಸ್ ವೊಂದನ್ನು 7 ಜನರ ದುಷ್ಕರ್ಮಿಗಳ ತಂಡವೊಂದು ಹೈಜಾಕ್ ಮಾಡಿದ್ದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕಲಾಸಿ ಪಾಳ್ಯ ಬಸ್ ನಿಲ್ದಾಣದಿಂದ ಹೊರಟಿದ್ದ ಲಾಮಾ ಟ್ರಾವಲ್ಸ್ ನ KA 01 AG 636 ನಂಬರ್​ನ ಬಸ್ ಅನ್ನು ದುಷ್ಕರ್ಮಿಗಳು ಹೈಜಾಕ್ ಮಾಡಲು ಪ್ರಯತ್ನಿಸಿದ್ದು, ಪೊಲೀಸರ ತುರ್ತು ಕಾರ್ಯಾಚರಣೆಯಿಂದಾಗಿ ಅಗಬಹುದಾಗಿದ್ದ ದುರಂತ ತಪ್ಪಿದೆ.

ಪೊಲೀಸರ ಮಾಹಿತಿಯಂತೆ ಹೈಜಾಕ್ ಆಗಿದ್ದ ಬಸ್ ನಲ್ಲಿ ಸುಮಾರು 42 ಮಂದಿ ಪ್ರಯಾಣಿಕರಿದ್ದರು. ಬಸ್ ಬೆಂಗಳೂರಿನ ಕಲಾಸಿ ಪಾಳ್ಯದಿಂದ ಕೇರಳಕ್ಕೆ ಹೊರಟಿತ್ತು. ಈ ವೇಳೆ 2 ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಬಸ್ ಅನ್ನು ಹಿಂಬಾಲಿಸಿದ್ದು, ಮೈಸೂರು ಮುಖ್ಯ ರಸ್ತೆಯ ಬಳಿ ಬಸ್ ಅನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬಸ್ ನೊಳಗೆ ಬಂದ ದುಷ್ಕರ್ಮಿಗಳು ತಾವು ಪೊಲೀಸರು ಎಂದು ಹೇಳಿ, ಬಸ್ ನ ದಾಖಲಾತಿ ಕೊಡುವಂತೆ ಹೇಳಿದ್ದಾರೆ. ಈ ವೇಳೆ ಸಿಬ್ಬಂದಿ ವಿರುದ್ಧ ವಾಗ್ವಾದ ನಡೆಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಬಸ್ ಚಾಲಕನನ್ನು ಬೈಕ್ ನಲ್ಲಿ ಕೂರಿಸಿಕೊಂಡ ಓರ್ವ ದುಷ್ಕರ್ಮಿ ಅಲ್ಲಿಂದ ತೆರಳುತ್ತಾನೆ. ಮತ್ತೋರ್ವ ಬಸ್ ತಾನೇ ಚಲಾಯಿಸಿಕೊಂಡು ರಾಜ ರಾಜೇಶ್ವರಿ ನಗರದ ಪಟ್ಟಣಗೆರೆ ಬಳಿ ಇರುವ ಗೋಡೌನ್ ಗೆ ಹೋಗುತ್ತಾನೆ. ಒಟ್ಟು 7 ಮಂದಿಯ ತಂಡ ಈ ಕೃತ್ಯವೆಸಗಿದೆ ಎಂದು ಹೇಳಲಾಗಿದೆ.

ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಉದ್ದೇಶಿಸಿ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಡಿ, ಹಾಗೇನಾದರೂ ಆದರೆ ನಿಮ್ಮ ಜೀವಕ್ಕೇ ಅಪಾಯ ಎಂದು ಮತ್ತೋರ್ವ ಎಚ್ಚರಿಕೆ ನೀಡಿದ್ದಾನೆ. ದುಷ್ಕರ್ಮಿಗಳಿಂದ ಬಸ್​ ಅಪಹರಣವಾಗುತ್ತಲೇ ಪ್ರಯಾಣಿಕರು ಭಯಭೀತಗೊಂಡಿದ್ದು, ಕೆಲ ಕಾಲ ಆತಂಕದಲ್ಲೇ ಸಮಯ ದೂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಕಣ್ಣುತಪ್ಪಿಸಿ ಓರ್ವ ಪ್ರಯಾಣಿಕ ಪೊಲೀಸರಿದೆ ವಿಷಯ ಮುಟ್ಟಿಸಿದ್ದು, ವಿಚಾರ ತಿಳಿದ ಕೂಡಲೇ ಸುಮಾರು 30 ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಬಸ್ ಅನ್ನು ಸುತ್ತುವರೆದಿದೆ.

ಪೊಲೀಸರು ಆಗಮಿಸುತ್ತಿದ್ದಂತೆಯೇ ನಾಲ್ಕು ಮಂದಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ತನಿಖೆ ನಡೆಸುತ್ತಿದ್ದಾರೆ.

ಬಸ್ ಹೈಜಾಕ್ ಗೆ ಟ್ರಾವಲ್ಸ್ ಮಾಲೀಕನೊಂದಿಗಿನ ಜಗಳವೇ ಕಾರಣ
ಇನ್ನು ಬಸ್ ಹೈಡಾಕ್ ಮಾಡಿದ್ದ ದುಷ್ಕರ್ಮಿಗಳು ಲಾಮಾ ಟ್ರಾವಲ್ಸ್ ಮಾಲೀಕ ನೌಷಾದ್​ ಎಂಬುವವರೊಂದಿಗೆ ಹಣಕಾಸಿನ ವಿಚಾರವಾಗಿ ಜಗಳ ಮಾಡಿಕೊಂಡಿದ್ದರಂತೆ. ಇದೇ ಕಾರಣಕ್ಕೆ ಬಸ್ ಹೈಜಾಕ್ ಮಾಡಿ ಬೆದರಿಕೆ ಹಾಕುವ ಪ್ರಯತ್ನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.