ಕರ್ನಾಟಕ

ವಿವಾದಕ್ಕೆ ಕಾರಣವಾದ ಸಿಎಂ ಫೇಸ್‌ ಬುಕ್‌ ಖಾತೆ ಮಾಹಿತಿ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಫೇಸ್‌ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ ಖಾತೆ ಇಲ್ಲ ಎಂದು ತಿಳಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸ್‌ಆ್ಯಪ್‌ ಸಂಖ್ಯೆ ಇದ್ದು, ಅದರ ನಿರ್ವಹಣೆಗೆ ಪ್ರತ್ಯೇಕ ತಂಡವಿದೆ. ಆದರೂ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.

ಈ ಕುರಿತು ಜಂಟಿ ಮುಖ್ಯ ಚುನಾವಣಾಧಿಕಾರಿ-2 ಎ.ವಿ.ಸೂರ್ಯಸೇನ್‌ ಅವರನ್ನು ಕೇಳಿದಾಗ, “ನಾಮಪತ್ರ ಸಲ್ಲಿಸಲು ಏ.24 ದಿನವಾಗಿದ್ದು, ಅಲ್ಲಿವರೆಗೆ ನಾಮಪತ್ರದ ಅಫಿಡವಿಟ್‌ನಲ್ಲಿ ಮಾರ್ಪಾಡು ಮಾಡಲು, ಪೂರಕ ಮಾಹಿತಿ ಸೇರಿಸಲು ಅವಕಾಶವಿರುತ್ತದೆ. ಅದರಂತೆ ಸೋಶಿಯಲ್‌ ಮಿಡಿಯಾ ಅಕೌಂಟ್ಸ್‌ಗಳ ಬಗ್ಗೆ ಮಾಹಿತಿ ಒದಗಿಸುವಂತೆ ನೋಟಿಸ್‌ ನೀಡಲು ಸಂಬಂಧಪಟ್ಟ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗುವುದು’ ಎಂದು ಹೇಳಿದ್ದಾರೆ.

ನೀತಿ ಸಂಹಿತೆ ಜಾರಿಯಾದ ಮೇಲೆ ಸರ್ಕಾರದ ಪರವಾಗಿದ್ದ ಖಾತೆ ಸ್ಥಗಿತವಾಗಿದ್ದು, ವೈಯಕ್ತಿಕ ಖಾತೆ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸೋಮವಾರ ಚುನಾವಣಾಧಿಕಾರಿಗೆ ಪರಿಷ್ಕೃತ ಪ್ರಮಾಣ ಪತ್ರ ತಿಳಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ನಿಯಮ ಏನು ಹೇಳುತ್ತೆ?: ರಿಸರ್ಜನ್ಸ್‌ ಇಂಡಿಯಾ 20008ರಲ್ಲಿ ಸುಪ್ರೀಂಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿತ್ತು. ಅದರಂತೆ 2013ರ ಸೆ.13ರಂದು ತೀರ್ಪು ನೀಡಿದ ಸುಪ್ರೀಂಕೋರ್ಟ್‌, ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯುವ ಅಫಿಡವಿಟ್‌ನ ಎಲ್ಲ ಕಾಲಂಗಳನ್ನು ಭರ್ತಿ ಮಾಡಬೇಕು. ಅದನ್ನು ಸಂಬಂಧಪಟ್ಟ ಚುನಾವಣಾಧಿಕಾರಿ ಖಾತರಿಗೊಳಿಸಬೇಕು.

ಒಂದು ವೇಳೆ ಯಾವುದಾರರೂ ಕಾಲಂ ಭರ್ತಿ ಮಾಡದೇ ಇದ್ದರೆ, ಆಭ್ಯರ್ಥಿಗೆ ನೋಟಿಸ್‌ ಕೊಟ್ಟು ಬಿಟ್ಟು ಹೋದ ಕಾಲಂ ಭರ್ತಿ ಮಾಡುವಂತೆ ಸೂಚನೆ ನೀಡಬೇಕು. ಚುನಾವಣಾಧಿಕಾರಿ ನೀಡಿದ ದಿನಾಂಕದೊಳಗೆ ಆಭ್ಯರ್ಥಿಯು ಮಾಹಿತಿ ಒದಗಿಸದಿದ್ದರೆ, ನಾಮಪತ್ರ ತಿರಸ್ಕರಿಸುವ ಅಧಿಕಾರ ಚುನಾವಣಾಧಿಕಾರಿಗೆ ಇರುತ್ತದೆ ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ನಾಮಪತ್ರದ ಅರ್ಜಿ ನಮೂನೆ 26ರಕ್ಕೆ ತಿದ್ದುಪಡಿ ತಂದು 2017 ಏ.7ರಂದು ಅಧಿಸೂಚನೆ ಹೊರಡಿಸಿದ ಚುನಾವಣಾ ಆಯೋಗ, ಅಭ್ಯರ್ಥಿಯ ದೂರವಾಣಿ ಮತ್ತು ಮೊಬೈಲ್‌ ಸಂಖ್ಯೆ, ಈ ಮೇಲ್‌ ಐಡಿಯ ಜೊತೆಗೆ ಸೋಶಿಯಲ್‌ ಮಿಡಿಯಾ ಅಕೌಂಟ್‌ಗಳಾದ ಫೆಸ್‌ಬುಕ್‌, ಟ್ವಿಟರ್‌, ವಾಟ್ಸಪ್‌ ಮುಂತಾದವುಗಳನ್ನು ಅಫಿಡವಿಟ್‌ನಲ್ಲಿ ಘೋಷಿಸುವುದನ್ನು ಕಡ್ಡಾಯಗೊಳಿಸಿತ್ತು.

ಆಯೋಗದ ಹೊಸ ಅಧಿಸೂಚನೆ ಹೊರ ಬಿದ್ದ ಬಳಿಕ ರಾಜ್ಯದಲ್ಲಿ ಇದೇ ಮೊದಲ ಚುನಾವಣೆ ನಡೆಯುತ್ತಿರುವುದರಿಂದ ಈ ಬಾರಿ ಅಭ್ಯರ್ಥಿಗಳು ತಮ್ಮ ಸೋಶಿಯಲ್‌ ಮಿಡಿಯಾ ಅಕೌಂಟ್‌ಗಳನ್ನು ಕಡ್ಡಾಯವಾಗಿ ಘೋಷಿಸಬೇಕು ಎಂದು ಆಯೋಗ ಹೇಳಿತ್ತು.

-ಉದಯವಾಣಿ

Comments are closed.