ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಸಂಭ್ರಮಿಸಿದ್ದನ್ನು ತಡೆಯದ ಮೋದಿ ವಿರುದ್ಧ ನನ್ನ ಕೋಪ: ಪ್ರಕಾಶ್ ರೈ

Pinterest LinkedIn Tumblr


ಮಡಿಕೇರಿ: ‘ಗೌರಿ ಲಂಕೇಶ್ ಹತ್ಯೆ ನನ್ನನ್ನು ಪ್ರಶ್ನೆ ಕೇಳುವಂತೆ ಪ್ರೇರಣೆ ನೀಡಿತು. ಆಕೆಯ ಹತ್ಯೆಯನ್ನು ಒಂದು ವರ್ಗದ ಜನರು ಸಂಭ್ರಮ ಆಚರಿಸಿ ಖುಷಿಪಟ್ಟರು. ಬಿಜೆಪಿ ಬೆಂಬಲಿಗರ ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ತಡೆಯದೇ ಸುಮ್ಮನಿದ್ದರು. ಹಾಗಾಗಿ ನಾನು ಮೊದಲು ಪ್ರಧಾನಿ ಮೋದಿಯನ್ನು ವಿರೋಧಿಸಿದೆ’ ಎಂದು ಪ್ರಕಾಶ್‌ ರೈ ಹೇಳಿದ್ದಾರೆ.

ಕೊಡಗು ಪ್ರೆಸ್‌ಕ್ಲಬ್‌ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಕಾಶ್‌ ರೈ, ನಾನು ಎಂದಿಗೂ ರಾಜಕೀಯಕ್ಕೆ ಎಂಟ್ರಿ ಆಗಲಾರೆ ಎಂದು ತಿಳಿಸಿದರು.

ಜಸ್ಟ್ ಆಸ್ಕಿಂಗ್ ಅನ್ನೋದು ರಾಜಕೀಯ ವೇದಿಕೆಯಲ್ಲ; ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತ ಗುಂಪಲ್ಲಿವೆ, ಪ್ರಶ್ನಿಸುವ ಜನರು ಬಹು ಸಂಖ್ಯೆಯಲ್ಲಿದ್ದಾರೆ. ನಾನು ಬಹುಸಂಖ್ಯಾತರ ಪರವಾಗಿ ಪ್ರಶ್ನಿಸಿ ಸಾಮಾನ್ಯನಾಗೇ ಇರುತ್ತೇನೆ. ರಾಜಕೀಯಕ್ಕೆ ಎಂಟ್ರಿಯಾಗಿ ಎಂಎಲ್ಎ, ಎಂಪಿಯಾಗೋ ಮೂಲಕ ಸಣ್ಣ ಬಾವಿಗೆ ಬೀಳಲಾರೆ. ಸಾಗರದಂತಿರುವ ಜನರ ಬಳಿಯೇ ನಾನು ಸದಾ ಇರಲು ಬಯಸುತ್ತೇನೆ ಎಂದು ರೈ ಹೇಳಿಕೊಂಡರು.

‘ನಾನು ಅನ್ಯಾಯವನ್ನು ನಿರಂತರವಾಗಿ ಪ್ರಶ್ನಿಸುತ್ತಲೇ ಇರುತ್ತೇನೆ. ಕೋಮುವಾದ ತಡೆಯಲು ಬಿಜೆಪಿ ವಿಫಲವಾಗುತ್ತಿದೆ, ಹಾಗಾಗಿ ನಾನು ಬಿಜೆಪಿಯ ವಿರೋಧಿ’ ಎಂದು ಸ್ಪಷ್ಟಪಡಿಸಿದರು.

ಪ್ರಕಾಶ್‌ ರೈಗೆ ಕಾಮನ್‌ ಸೆನ್ಸ್‌ ಅನ್ನುವುದೇ ಇಲ್ಲ: ಸುರೇಶ್‌ ಕುಮಾರ್‌

ಕಾವೇರಿ ಸತ್ಯ ಬಹಿರಂಗ ಮಾಡುವೆ:
ಕಾವೇರಿ ವಿಚಾರವಾಗಿ ಎರಡು ತಿಂಗಳಲ್ಲಿ ಸತ್ಯವನ್ನು ಬಹಿರಂಗ ಮಾಡುತ್ತೇನೆ. ಈ ವಿಚಾರದಲ್ಲಿ ಎರಡು ರಾಜ್ಯದ ಜನಪ್ರತಿನಿಧಿಗಳು ಜನರಿಗೆ ಮೋಸ ಮಾಡಿದ್ದಾರೆ. ಪ್ರಕೃತಿಯನ್ನು ಬದಲಾವಣೆ ಮಾಡಬೇಡಿ, ಪ್ರವೃತ್ತಿಯನ್ನು ಬದಲಾವಣೆ ಮಾಡಿಕೊಳ್ಳಿ ಎಂದು ಅವರು ಆಗ್ರಹಿಸಿದರು.

ಬಿಜೆಪಿ ಜತೆ ಜೆಡಿಎಸ್‌ ಕೈಜೋಡಿಸಬಾರದು:
ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಬಾರದು ಎಂದು ಪ್ರಕಾಶ್ ರೈ ಮನವಿ ಮಾಡಿದರು.

Comments are closed.