ಕರ್ನಾಟಕ

ನಿರೀಕ್ಷೆ ಮುಟ್ಟದ ಲೆಕ್ಕಾಚಾರ;ನಾಯಕರಿಗೆ ಶಾ ಫುಲ್‌ ಕ್ಲಾಸ್‌

Pinterest LinkedIn Tumblr


ಬಂಡಾಯ ನಿಯಂತ್ರಣ ವೈಫಲ್ಯ, ನಿರೀಕ್ಷಿತ ಮಟ್ಟ ತಲುಪದ ಚುನಾವಣಾ ಲೆಕ್ಕಾಚಾರಗಳು ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್‌ ಶಾ ಗುರುವಾರ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಗುರುವಾರ ಬೆಳಗಿನ ಜಾವ ಎರಡು ಗಂಟೆಯವರೆಗೂ ತಮ್ಮ ನಿವಾಸದಲ್ಲಿ ಬಿಜೆಪಿ ನಾಯಕರ ಜತೆ ಸಭೆ ನಡೆಸಿದ ಅವರು ಬೆಳಗ್ಗೆ 10 ಗಂಟೆ ನಂತರ ಮತ್ತೆ ‘ಚುನಾವಣಾ ಪಾಠ’ ಮಾಡಿದ್ದಾರೆ. ಸಂಸದರಿಗೆ ಟಿಕೆಟ್‌ ನೀಡುವುದು, ಸಿದ್ದರಾಮಯ್ಯ ಸರಕಾರದ ವಿರುದ್ಧ ಸರ್ಜಿಕಲ್‌ ದಾಳಿ ಸೇರಿದಂತೆ ಪ್ರಮುಖ ರಣನೀತಿಯ ಬಗ್ಗೆ ಚಾಲುಕ್ಯ ವೃತ್ತ ಸಮೀಪದಲ್ಲಿರುವ ಅಮಿತ್‌ ಶಾ ನಿವಾಸದಲ್ಲಿ ‘ಮಂತ್ರಾಲೋಚನೆ’ ನಡೆದಿದ್ದು, ರಾಜ್ಯ ನಾಯಕರ ಆಂತರಿಕ ಹಗ್ಗ ಜಗ್ಗಾಟದ ಬಗ್ಗೆ ತೀಕ್ಷ್ಣ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿ ನಾಯಕರ ಜತೆಗೆ ಪ್ರತ್ಯೇಕ ಸಭೆ ನಡೆಸಿರುವ ಅಮಿತ್‌ ಶಾ ಡಿಸೆಂಬರ್‌ 31ರಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಪ್ರಕಾಶ್‌ ಜಾವಡೇಕರ್‌, ಪಿಯೂಶ್‌ ಗೋಯಲ್‌ ಜತೆ ಮೂರು ಗಂಟೆ ಕಾಲ ಚರ್ಚೆ ನಡೆಸಿದರು. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಶಾ ಭೇಟಿ ಮಾಡಿ ಮಾತುಕತೆ ನಡೆಸಿದರು.

ಟ್ರೋಲ್‌ ಆಪರೇಷನ್‌: ಆ ಬಳಿಕ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ನಿರ್ವಹಣಾ ಸಮಿತಿ ಹಾಗೂ ಸೋಷಿಯಲ್‌ ಮೀಡಿಯಾ ಹಾಗೂ ಮಾಧ್ಯಮ ವಿಭಾಗದ ಸದಸ್ಯರ ಜತೆ ಸುದೀರ್ಘ ಸಭೆ ನಡೆಸಿದ ಅವರು ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರ ವಿರುದ್ಧ ಇನ್ನಷ್ಟು ಟ್ರೋಲ್‌ ಆಪರೇಷನ್‌ ನಡೆಸುವಂತೆ ಸೂಚನೆ ನೀಡಿದರು.

ಖರ್ಗೆ ಆಪ್ತನಿಗೆ ಆಪರೇಷನ್‌: ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಕಟ್ಟಾ ಬೆಂಬಲಿಗ ಹಾಗೂ ದಲಿತ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಲಾಗಿದೆ. ದೇವನಹಳ್ಳಿ ಮೀಸಲು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಾರಾಯಣಸ್ವಾಮಿ ಕೊನೆ ಕ್ಷಣದಲ್ಲಿ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಅವರನ್ನು ಸಂಪರ್ಕಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಇದು ಕೂಡ ಅಮಿತ್‌ ಶಾ ತಡರಾತ್ರಿ ಸಭೆಯ ಮಹತ್ವದ ಫಲಿತಾಂಶಗಳಲ್ಲಿ ಒಂದು.

ಸಂಸದರ ಸ್ಪರ್ಧೆ ಪ್ರಧಾನಿ ಅಂಗಳಕ್ಕೆ

ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಬಯಸಿರುವ ಸಂಸದ ಕರಡಿ ಸಂಗಣ್ಣ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಟಿಕೆಟ್‌ ಬಗ್ಗೆ ಯಡಿಯೂರಪ್ಪ ಜತೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ, ಈ ಜವಾಬ್ದಾರಿಯನ್ನು ಮತ್ತೆ ರಾಷ್ಟ್ರೀಯ ಅಧ್ಯಕ್ಷರ ಹೆಗಲಿಗೆ ವರ್ಗಾಯಿಸಿರುವ ಯಡಿಯೂರಪ್ಪ, ”ಸಂಸದರಿಗೆ ಟಿಕೆಟ್‌ ನೀಡುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರೇ ನಿರ್ಧರಿಸಬೇಕು,” ಎಂದು ಹೇಳಿ ಜಾರಿಕೊಂಡಿದ್ದಾರೆ. ಈ ಮಧ್ಯೆ ಸಂಸದರಾದ ಪಿ.ಸಿ.ಮೋಹನ್‌, ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ ಸೇರಿದಂತೆ ಇನ್ನೂ ಕೆಲವರಿಗೆ ಟಿಕೆಟ್‌ ನೀಡಬೇಕೋ, ಬೇಡವೋ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಮಿತ್‌ ಶಾ ಕೂಡಾ ಸ್ಪಷ್ಟನೆ ನೀಡಿದ್ದಾರೆ.

Comments are closed.