ಕರ್ನಾಟಕ

ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಸಾಧ್ಯತೆ

Pinterest LinkedIn Tumblr


ಮೈಸೂರು: ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸದ್ಯಕ್ಕೆ ಆ ವಿಚಾರವಾಗಿ ಏನೂ ಹೇಳಲಾರೆ’ ಎಂದು ತಿಳಿಸಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವುದಾಗಿ ಈಗಾಗಲೇ ಹೈಕಮಾಂಡ್‌ಗೆ ಸ್ಪಷ್ಟಪಡಿಸಿದ್ದೇನೆ. ಅದರಂತೆ ಪಟ್ಟಿಯೂ ಪ್ರಕಟವಾಗಿದೆ. ಆದರೆ ಇಂದಿಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಬರುತ್ತಿದೆ. ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆ ಭಾಗದ ಮುಖಂಡರು ಒತ್ತಡ ಹೇರಿದ್ದಾರೆ ಎಂದರು.

ಬಾದಾಮಿ ಕ್ಷೇತ್ರದ ಬಿ ಫಾರಂ ನೀಡುವುದನ್ನು ತಡೆ ಹಿಡಿಯುವಂತೆ ತಿಳಿಸಿದ್ದೆ. ಒಟ್ಟಾರೆ ಈ ಕುರಿತು ನಾನು ಸದ್ಯಕ್ಕೆ ಏನನ್ನೂ ಹೇಳಲಾರೆ ಎಂದರು.

ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆ ಅವರನ್ನು ಹಿಂಬಾಲಿಸುತ್ತಿದ್ದ ಎಸ್ಕಾರ್ಟ್ ವಾಹನ ಅಪಘಾತಕ್ಕೆ ಒಳಗಾದ ಬಗ್ಗೆ ಪ್ರತಾಪ್ ಸಿಂಹ ಅವರು ‘‘ಸಾಮರ್ಥ್ಯವಿದ್ದರೆ ರಾಜಕೀಯವಾಗಿ ಮುಖಾಮುಖಿಯಾಗಿ ಅದನ್ನು ಬಿಟ್ಟು ಬೇರೆ ವಿಧಾನದಲ್ಲಿ ಅನಂತಕುಮಾರ್ ಅವರನ್ನು ಮುಗಿಸಲು ಪ್ರಯತ್ನಿಸಿದರೆ ಅದಕ್ಕೆ ಉತ್ತರ ನೀಡುತ್ತೇವೆ’’ ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಎಲ್ಲೊ ಅಪಘಾತವಾದರೆ ನಾನು ಹೇಗೆ ಕಾರಣವಾಗುತ್ತೇನೆ. ಬಿಜೆಪಿ ಕೆಲ ಮುಖಂಡರುಗಳು ಕ್ರಿಮಿನಲ್ಗಳಾಗಿದ್ದಾರೆ ಅವರ ಮನಸ್ಥಿತಿ ಎಂತಹದ್ದು ಎಂಬುದು ಈ ರೀತಿಯ ಪ್ರತಿಕ್ರಿಯೆಗಳಿಂದ ತಿಳಿಯುತ್ತದೆ. ಕ್ರಿಮಿನಲ್ ಹಿನ್ನಲೆಯುಳ್ಳವರಿಂದ ನಾನು ಏನನ್ನೂ ಕಲಿಯಬೇಕಿಲ್ಲ. ಅಲ್ಲದೆ ನಾನೊಬ್ಬ ಜಾತ್ಯಾತೀತ ಹಿಂದುವಾಗಿದ್ದು ಬಿಜೆಪಿಯವರಂತೆ ನಾನು ಕೋಮುವಾದಿ ಹಿಂದುವಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ವಂಚಿತರ ವಿಚಾರವಾಗಿ ಪ್ರತಿಕ್ರಿಯಿಸಿ, ಅಸಮಾಧಾನಗೊಂಡವರನ್ನು ಸಮಾಧಾನಪಡಿಸಲಾಗುವುದು. ಈಗಾಗಲೇ ಹಾನಗಲ್‌ ಕೆಲವು ನಾಯಕರು ಆಗಮಿಸಿ ಚರ್ಚಿಸಿದ್ದಾರೆ. ಮತ್ತೊಮ್ಮೆ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಪಡೆದು ಹೈಕಮಾಂಡ್‌ಗೆ ಕಳುಹಿಸುವುದಾಗಿ ತಿಳಿಸಿದ್ದೇನೆ ಎಂದರು.

ಬುಧವಾರ ಮುಂಜಾನೆಯಿಂದಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು.

Comments are closed.