ಕರ್ನಾಟಕ

15 ಕ್ಷೇತ್ರಗಳಲ್ಲಿ ಬಂಡಾಯ? ಕಾಂಗ್ರೆಸ್‌ ಪಾಲಿಗೆ ಮುಗಿಯದ ಕಗ್ಗಂಟು

Pinterest LinkedIn Tumblr


ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ 218 ಅಭ್ಯರ್ಥಿಗಳ ಪಟ್ಟಿ ಒಂದೇ ಹಂತದಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್‌ನಲ್ಲಿ ಟಿಕೆಟ್‌ ವಂಚಿತರ ಆಕ್ರೋಶ ತೀವ್ರಗೊಂಡಿದ್ದು, 15 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯದ ಭೀತಿ ಎದುರಾಗಿದೆ.

ತಿಪಟೂರು, ಸಿರಗುಪ್ಪ, ಜಗಳೂರು, ಕೋಲಾರ, ಬದಾಮಿ, ಹಾನಗಲ್‌, ಸರ್‌.ಸಿ.ವಿ.ರಾಮನ್‌ನಗರ, ತರೀಕೆರೆ, ಮಾಯಕೊಂಡ, ಪುಲಕೇಶಿನಗರ, ಬ್ಯಾಡಗಿ, ವಿಜಯಪುರ, ಚಿಂತಾಮಣಿ, ಪಾವಗಡ, ತುಮಕೂರು ಗ್ರಾಮಾಂತರ, ರಾಜಾಜಿನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರು ಬೇರೆ ಪಕ್ಷಗಳತ್ತ ಚಿತ್ತ ಹಾಯಿಸುವುದರ ಜತೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆ.

ಟಿಕೆಟ್‌ ಸಿಗದ ಕಾರಣ ತಿಪಟೂರು, ಬಾದಾಮಿ, ಮುಧೋಳ, ರಾಯಚೂರು, ತರೀಕೆರೆ, ಸಿರಗುಪ್ಪ, ಲಿಂಗಸಗೂರು, ಮಾಯಕೊಂಡ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಬೆಂಬಲಿಗರು ಧರಣಿ, ಬಂದ್‌, ಪ್ರತಿಭಟನೆ, ರಸ್ತೆ ತಡೆ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ರಾಯಚೂರಿನಲ್ಲಿ ಸೈಯದ್‌ ಯಾಸೀನ್‌ ಅವರಿಗೆ ಟಿಕೆಟ್‌ ತಪ್ಪಿದ್ದು ಖಂಡಿಸಿ ಅವರ ಬೆಂಬಲಿಗರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಟಿಕೆಟ್‌ ತಪ್ಪಿದ್ದಕ್ಕಾಗಿ ರವಿ ಪಾಟೀಲ್‌ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಮುಧೋಳದಲ್ಲಿ ಆರ್‌.ಬಿ.ತಿಮ್ಮಾಪುರ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಧರಣಿ ನಡೆಸಿ ಮುಧೋಳ ಬಂದ್‌ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದರು.ನಲವಗುಂದ ಕ್ಷೇತ್ರದಿಂದ ಟಿಕೆಟ್‌ ತಪ್ಪಿದ ಪ್ರಕಾಶ್‌ ಅಂಗಡಿ, ಪಕ್ಷದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ತಿಳಿಸಿದರು.

ಬ್ಯಾಡಗಿಯಲ್ಲಿ ಹಾಲಿ ಶಾಸಕ ಬಸವರಾಜ ಶಿವಣ್ಣನವರ ಬೆಂಬಲಿಗರು ಟಿಕೆಟ್‌ ತಪ್ಪಿದ್ದಕ್ಕಾಗಿ ಪ್ರತಿಭಟನೆ ನಡೆಸಿದರು.ಕಿತ್ತೂರು ಕ್ಷೇತ್ರದಿಂದ ಡಿ.ಬಿ.ಇನಾಂದಾರ್‌ಗೆ ಟಿಕೆಟ್‌ ಘೋಷಣೆ ಮಾಡದ ಬಗ್ಗೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.ಹಾನಗಲ್‌ನಲ್ಲಿ ಟಿಕೆಟ್‌ ವಂಚಿತ ಹಾಲಿ ಶಾಸಕ ಮನೋಹರ್‌ ತಹಸೀಲ್ದಾರ್‌ , ನನ್ನ ನಿಷ್ಠೆಯೇ ನನಗೆ ಮುಳುವಾಯಿತು.ಎಂತಹ ಸ್ಥಿತಿಲ್ಲೂ ಪಕ್ಷ ದೋಹ ಮಾಡುವುದಿಲ್ಲ ಎಂದು ಭಾವುಕರಾದರು. ದೇವರಹಿಪ್ಪರಗಿಯಲ್ಲಿ ಟಿಕೆಟ್‌ ವಂಚಿತ ಆನಂದ ದೊಡ್ಡಮನಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.ಮದ್ದೂರಿನಲ್ಲಿ ಟಿಕೆಟ್‌ ತಪ್ಪಿದ್ದರಿಂದ ಕಲ್ಪನಾ ಸಿದ್ದರಾಜು ಕಣ್ಣೀರಿಟ್ಟಿದ್ದಾರೆ. ಮಂಡ್ಯ ಕ್ಷೆÒàತ್ರದಲ್ಲಿ ರವಿಕುಮಾರ್‌ ಎಂಬವವರು ಕಾಂಗ್ರೆಸ್‌ ಕಚೇರಿಗೆ ನುಗ್ಗಿ ಕುರ್ಚಿಗಳನ್ನು ಒಡೆದುಹಾಕಿದ್ದಾರೆ.

ಇತ್ತ ಕೆಪಿಸಿಸಿ ಕಚೇರಿ ಬಳಿಯೂ ಸೋಮವಾರ ಟಿಕೆಟ್‌ ವಂಚಿತರ ಬೆಂಬಲಿಗರು ಧರಣಿ ನಡೆಸಿ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮೇಯರ್‌ ಜಿ.ಪದ್ಮಾವತಿಯವರಿಗೆ ಟಿಕೆಟ್‌ ನೀಡಿರುವುದನ್ನು ಖಂಡಿಸಿ ಆಕಾಂಕ್ಷಿಯಾಗಿದ್ದ ಮಂಜುಳಾ ನಾಯ್ಡು ನೇತೃತ್ವದಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ನಾನು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತೆ. ಪದ್ಮಾವತಿ ಕಳೆದ ಚುನಾವಣೆಯಲ್ಲಿ ಕೆಜೆಪಿ ಪರ ಕೆಲಸ ಮಾಡಿದ್ದರು. ಕಾರ್ಯಕರ್ತರು ಮತ್ತು ಬೆಂಬಲಿಗರು ಬಯಸಿದರೆ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಹೇಳಿದರು. ಬೆಂಗಳೂರಿನಲ್ಲಿ 28 ಕ್ಷೇತ್ರಗಳಿವೆ. ಒಂದೇ ಒಂದು ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್‌ ನೀಡಿಲ್ಲ ಎಂದು ದೂರಿದರು.

ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌ ಅವರು ಅತೃಪ್ತರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದು, ಕೆಲವು ಕ್ಷೇತ್ರಗಳಲ್ಲಿ ನಾಯಕರ ವಿರುದ್ಧ ತಿರುಗಿಬಿದ್ದಿರುವ ಆಕಾಂಕ್ಷಿಗಳು ಸಮಾಧಾನಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು ಬಂಡಾಯಗಾರರು ಸ್ಪರ್ಧೆಗೆ ಇಳಿಯದಂತೆ ನೋಡಿಕೊಳ್ಳುವುದೇ ನಾಯಕರಿಗೆ ತಲೆನೋವಿನ ಕೆಲಸ ಆಗಿದ್ದು, ಆಯಾ ಜಿಲ್ಲಾ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರು, ಟಿಕೆಟ್‌ ಪಡೆದವರು, ಸಮುದಾಯದ ನಾಯಕರ ಮೂಲಕ ಅಸಮಾಧಾನಿತರನ್ನು ಸಮಾಧಾನಮಾಡುವ ಪ್ರಯತ್ನ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ತೀರಾ ಕಷ್ಟಕರ ಎನಿಸಿದರೆ ಒಂದೆರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬದಲಾಗುವ ಸಾಧ್ಯತೆಯೂ ಇಲ್ಲದಿಲ್ಲ ಎಂದೂ ಹೇಳಲಾಗಿದೆ.

ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಜೆಡಿಎಸ್‌ ಹಾಗೂ ಬಿಜೆಪಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಿಗೆ ಗಾಳ ಹಾಕಿದ್ದು, ಟಿಕೆಟ್‌ ಭರವಸೆ ಸಹ ನೀಡುತ್ತಿದೆ. ಹೀಗಾಗಿ, ಬೇರೆ ಪಕ್ಷಗಳತ್ತ ಹೋಗುವವರನ್ನು ತಡೆಯುವ ಕಸರತ್ತು ನಡೆಯುತ್ತಿದೆ.

ಎನ್‌.ವೈ.ಗೋಪಾಲಕೃಷ್ಣಗೆ ಬಿಜೆಪಿ ಗಾಳ
ಕಾಂಗ್ರೆಸ್‌ನಿಂದ ಟಿಕೆಟ್‌ ತಪ್ಪಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.ಸಂಸದ ಶ್ರೀರಾಮುಲು ಅವರು ಗೋಪಾಲಕೃಷ್ಣ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಗೋಪಾಲಕೃಷ್ಣ ಬಿಜೆಪಿ ಸೇರಿದರೆ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಯ ಯಾವುದಾದರೊಂದು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಅಥವಾ ಶ್ರೀರಾಮುಲು ಅವರಿಂದ ತೆರವಾಗುವ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿ ಮಾಡುವ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಇನ್ನು, ಪಾವಗಡದ ಕಾಂಗ್ರೆಸ್‌ ಮುಖಂಡ ಬಿ.ವಿ.ಬಲರಾಂ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಪಾವಗಡಕ್ಕೆ ವೆಂಕಟರಮಣಪ್ಪ ಅವರಿಗೆ ಟಿಕೆಟ್‌ ಕೊಟ್ಟಿದ್ದರಿಂದ ಬೇಸರಗೊಂಡ ಅವರು ಯಡಿಯೂರಪ್ಪ ಸಮ್ಮುಖದಲ್ಲಿ ಸೋಮವಾರ ಬಿಜೆಪಿ ಸೇರಿದರು. ಪಾವಗಡ ಕ್ಷೇತ್ರದಿಂದ ಬಲರಾಂ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

-ಉದಯವಾಣಿ

Comments are closed.