ಕರ್ನಾಟಕ

ಉದ್ಯಮಿಗೆ 60 ಲಕ್ಷ ವಂಚಿಸಿದ ಯುವತಿ

Pinterest LinkedIn Tumblr


ಬೆಂಗಳೂರು: ಡೇಟಿಂಗ್‌ ವೆಬ್‌ಸೈಟ್‌ನಲ್ಲಿ ಉದ್ಯಮಿಯೊಬ್ಬರನ್ನು ಪರಿಚಯಸಿಕೊಂಡ ಯುವತಿ ನಂತರ ಅವರಿಗೆ ಬರೋಬ್ಬರಿ 60 ಲಕ್ಷ ರೂ. ವಂಚಿಸಿರುವ ಪ್ರಕರಣ ವರದಿಯಾಗಿದೆ. ಉದ್ಯಮಿ ಬೇಗೂರಿನ ಸುರೇಶ್‌ ಎಂಬುವರು ಈ ಕುರಿತು ಪಶ್ಚಿಮ ಬಂಗಾಳ ಮೂಲದ ಅರ್ಪಿತಾ ಎಂಬಾಕೆ ವಿರುದ್ಧ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡೇಟಿಂಗ್‌ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಸುರೇಶ್‌ ಅವರ ಮೊಬೈಲ್‌ ಸಂಖ್ಯೆಯನ್ನು ಪಡೆದು, 2017ರ ಸೆ.18ರಂದು ಸುರೇಶ್‌ ಅವರನ್ನು ಸಂಪರ್ಕಿಸಿದ ಯುವತಿ, ತಾನು ಪಶ್ಚಿಮ ಬಂಗಾಳ ಮೂಲದ ಅರ್ಪಿತಾ ಎಂದು ಪರಿಚಯಿಸಿಕೊಂಡಿದ್ದಳು. ಹೀಗಾದ ಪರಿಚಯ ಮುಂದುವರಿದು ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡುತ್ತಿದ್ದರು.

ಈ ಮಧ್ಯೆ ಆಕೆ ತನ್ನ ಅರೆನಗ್ನ ಫೋಟೋವನ್ನು ಸುರೇಶ್‌ ಅವರಿಗೆ ಕಳುಹಿಸಿ ಭೇಟಿಯಾಗುವುದಾಗಿ ಹೇಳಿದ್ದಳು. ನಂತರ ವಾಟ್ಸ್‌ಆ್ಯಪ್‌ನಲ್ಲಿ ಇಬ್ಬರೂ ಪ್ರತಿನಿತ್ಯ ಚಾಟ್‌ ಮಾಡುತ್ತಿದ್ದರು. ಆದರೆ, ಭೇಟಿ ಮಾಡುವ ದಿನಾಂಕವನ್ನು ಮುಂದೂಡುತ್ತಾ ಬರುತ್ತಿದ್ದಳು. ಕರೆ ಮಾಡಿದಾಗಲೂ ಸಬೂಬು ಹೇಳಿ ಭೇಟಿಗೆ ನಿರಾಕರಿಸುತ್ತಿದ್ದಳು.

ಈ ಮಧ್ಯೆ ಒಮ್ಮೆ ಸುರೇಶ್‌ ಅವರಿಗೆ ಕರೆ ಮಾಡಿದ ಯುವತಿ, ತಂದೆಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲು ತುರ್ತು 30 ಸಾವಿರ ರೂ. ಬೇಕೆಂದು ಕೇಳಿದ್ದಳು. ಇದನ್ನು ನಂಬಿದ ಸುರೇಶ್‌ ಆಕೆಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.

ತಾನು ಮೊದಲ ಬಾರಿ ಹಣ ಕೇಳಿದಾಗಲೇ ಸುರೇಶ್‌ ಹಣ ಕೊಟ್ಟಿದ್ದರಿಂದ ಅವರಿಂದ ಇನ್ನಷ್ಟು ಹಣ ಕೀಳಲು ಮುಂದಾದ ವಂಚಕಿ, ತಂದೆಯನ್ನು ಕೋಲ್ಕೊತ್ತಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಶಸ್ತ್ರ ಚಿಕಿತ್ಸೆಗಾಗಿ 14 ಲಕ್ಷ ರೂ. ಬೇಕಾಗಿದೆ ಎಂದು ಕೇಳಿದ್ದಳು.

ಆಕೆಯ ಮಾತು ನಂಬಿದ ಸುರೇಶ್‌ ಮತ್ತೆ ಆಕೆ ಖಾತೆಗೆ ಹಣ ಹಾಕಿದ್ದರು. ಇದೇ ರೀತಿ ಪದೇ ಪದೆ ಕರೆ ಮಾಡಿ ತಂದೆಯ ಚಿಕಿತ್ಸೆಗೆಂದು ಸುರೇಶ್‌ ಅವರಿಂದ ಆಕೆ ಒಟ್ಟು 60 ಲಕ್ಷ ರೂ.ಗಳನ್ನು ವಂಚಕಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾಳೆ.

ನಂತರವೂ ಹಣಕ್ಕೆ ಬೇಡಿಕೆ ಇಟ್ಟಾಗ ಸುರೇಶ್‌, ಭೇಟಿ ಮಾಡಿದರೆ ಹಣ ಕೊಡುವುದಾಗಿ ಹೇಳಿದ್ದರು. ಆದರೆ, ಆಕೆ ಭೇಟಿಗೆ ನಿರಾಕರಿಸಿ ಕರೆ ಸ್ಥಗಿತಗೊಳಿಸಿದ್ದಳು. ನಂತರ ಮತ್ತೆ ಹಲವು ಬಾರಿ ಕರೆ ಮಾಡಿದಾಗಲೂ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಸುರೇಶ್‌ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

-ಉದಯವಾಣಿ

Comments are closed.