ಕರ್ನಾಟಕ

ರಾಜ್ಯದಲ್ಲಿ ಎದ್ದಿವೆ 7 ನವಜಾತ ಪಕ್ಷಗಳು

Pinterest LinkedIn Tumblr


ಬೆಂಗಳೂರು: ಚುನಾವಣೆಯಿದು ಹೊಸ ರಾಜಕೀಯ ಪಕ್ಷಗಳ ಹುಟ್ಟಿಗೆ ಸುಗ್ಗಿಯ ಕಾಲ. ಚುನಾವಣಾ ಕಣ ರಂಗೇರುತ್ತಿರುವಂತೆ, ರಾಜಕೀಯ ನೆಲೆ ಕಂಡುಕೊಳ್ಳಲು ಕೆಲವು “ನವಜಾತ’ ಪಕ್ಷಗಳು ರಂಗ ತಾಲೀಮು ಆರಂಭಿಸಿವೆ. ಹಾಗಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳ ಸಂಖ್ಯೆ 60ರ ಗಡಿ ದಾಟಲಿದೆ.

ಆರು ರಾಷ್ಟ್ರೀಯ, 1 ರಾಜ್ಯ 6 ಬೇರೆ ರಾಜ್ಯದ ರಾಜ್ಯಪಕ್ಷಗಳು ಹಾಗೂ ಕರ್ನಾಟಕದ ನೋಂದಾಯಿತ ಮತ್ತು ಬೇರೆ ರಾಜ್ಯಗಳಲ್ಲಿ ನೋಂದಾಯಿತ ಸುಮಾರು 46 ಪಕ್ಷಗಳು ಸೇರಿದಂತೆ 2013ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 59 ಪಕ್ಷಗಳು ಸ್ಪರ್ಧಿಸಿದ್ದವು.

ಈಗ 2018ರ ಚುನಾವಣೆ ಮೇಲೆ ಕಣ್ಣಿಟ್ಟು ಈಗಾಗಲೇ ಏಳು ಹೊಸ ಪಕ್ಷಗಳು ಹುಟ್ಟಿಕೊಂಡಿವೆ. ಅದರಂತೆ ರಾಜ್ಯದ ನೊಂದಾಯಿತ ಪಕ್ಷಗಳ ಸಂಖ್ಯೆ 47 ಆಗಿದೆ. ಇದರ ಜೊತೆಗೆ ಏಳು ರಾಷ್ಟ್ರೀಯ ಪಕ್ಷಗಳು, 1 ರಾಜ್ಯ ಪಕ್ಷ ಚುನಾವಣಾ ಆಯೋಗದ ಪಟ್ಟಿಯಲ್ಲಿದ್ದು, ಬೇರೆ ರಾಜ್ಯಗಳ ಪಕ್ಷಗಳು ಸಹ ಸ್ಪರ್ಧೆಯಲ್ಲಿರುತ್ತವೆ. ಈ ರೀತಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳ ಸಂಖ್ಯೆ 60ರ ಗಡಿ ದಾಟುವ ಸಾಧ್ಯತೆಯಿದೆ.

ನಟ ಉಪೇಂದ್ರ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಮಹೇಶ್‌ಗೌಡ ಸ್ಥಾಪಿತ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ (ಕೆಪಿಜೆಪಿ) ಸಾಕಷ್ಟು ಸದ್ದು ಮಾಡಿತ್ತು. ಮಹೇಶ್‌ ಗೌಡ ಜೊತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಉಪೇಂದ್ರ ಹೊರಬಂದು ಪ್ರಜಾಕೀಯ ಆರಂಭಿಸಿದರು. ಆದರೆ, ಅದು ನೋಂದಾಯಿತ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಕೆಪಿಜೆಪಿ, ಪ್ರಜಾಕೀಯ ಎರಡೂ ಸ್ಪರ್ಧಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಈ ಮಧ್ಯೆ ಮಾಜಿ ಡಿವೈಎಸ್ಪಿ ಅನುಪಮಾ ಶೈಣೆಯವರ “ಭಾರತೀಯ ಜನಶಕ್ತಿ ಕಾಂಗ್ರೆಸ್‌’, ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಅವರ “ನಮ್ಮ ಕಾಂಗ್ರೆಸ್‌’ ಪಕ್ಷ, “ಪ್ರಜಾ ಪರಿವರ್ತನಾ ಪಾರ್ಟಿ’, “ಭಾರತೀಯ ಪ್ರಜಾ ಕಲ್ಯಾಣ ಪಾರ್ಟಿ’, “ರಾಣಿ ಚೆನ್ನಮ್ಮ ಪಾರ್ಟಿ’ ಸೇರಿದಂತೆ ಕೆಲವೊಂದು ಪಕ್ಷಗಳು 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿವೆ. ಬೇರೆ ರಾಜ್ಯಗಳ ನೋಂದಾಯಿತ ಪಕ್ಷಗಳಾದ ಶಿವಸೇನೆ, ಎಂಇಎಸ್‌, ಮುಸ್ಲಿಂ ಲೀಗ್‌, ಜೆಡಿಯು, ಎಐಎಡಿಂಕೆ, ಡಿಎಂಕೆ, ಸಮಾಜವಾದಿ ಪಾರ್ಟಿ, ಲೋಕಜನಶಕ್ತಿ ಅದೃಷ್ಟ ಪರೀಕ್ಷೆಗಳಿಯುವುದು ನಿಶ್ಚಿತ.

ಇದರ ಜೊತೆಗೆ ಆಮ್‌ ಆದ್ಮಿ ಪಕ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದೆ. ಈ ಮಧ್ಯೆ ಹಲವು ಪಕ್ಷಗಳನ್ನೊಳಗೊಂಡ ಜನಾಂದೋಲನಗಳ ಮಹಾಮೈತ್ರಿ, ಎಂಇಪಿ, ಎಂಐಎಂ, ಎಸ್‌ಡಿಪಿಐ ಚುನಾವಣಾ ಅಖಾಡಗೆ ಇಳಿಯಲು ಸಜ್ಜಾಗಿವೆ.

ಮೈಸೂರು ವಿಧಾನಸಭೆ ಹೆಸರಲ್ಲಿ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 6 ಪಕ್ಷಗಳು ಸ್ಪರ್ಧಿಸಿದ್ದವು. ನಂತರ 1985ರವರೆಗೆ ಅಂದರೆ ಏಳು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಪಕ್ಷಗಳ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ತೊಂಭತ್ತರ ದಶಕದಿಂದ ಪಕ್ಷಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತ ಬಂದಿತು.

ರಾಷ್ಟ್ರೀಯ, ಪ್ರಾದೇಶಿಕ, ರಾಜ್ಯದ, ಹೊರ ರಾಜ್ಯದ ಹಾಗೂ ನೊಂದಾಯಿತ ಪಕ್ಷಗಳು ಸೇರಿ 1989ರಲ್ಲಿ 20, 94 ಮತ್ತು 99ರಲ್ಲಿ 22, 2004ರಲ್ಲಿ 32, 2008ರಲ್ಲಿ 31 ಹಾಗೂ 2013ರಲ್ಲಿ ಒಟ್ಟು 59 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 2004ರಿಂದ 2008ರವರೆಗೆ ಮತ್ತು ನಂತರದಲ್ಲಿ ನಡೆದ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ಹೊಸ ಪಕ್ಷಗಳ ಹುಟ್ಟಿಗೆ ಭೂಮಿಕೆಯಾಯಿತು.

2008ರಲ್ಲಿ 31 ಪಕ್ಷಗಳು ಸ್ಪರ್ಧಿಸಿದ್ದರೆ, 2013ರಲ್ಲಿ ಆ ಸಂಖ್ಯೆ ದುಪ್ಪಟ್ಟುಗೊಂಡಿತು. 2013ರ ಚುನಾವಣೆಯ ಚಿತ್ರಣ ಬದಲಾಯಿಸಿದ್ದ ಕೆಜೆಪಿ ಹಾಗೂಬಿಎಸ್ಸಾರ್‌ ಕಾಂಗ್ರೆಸ್‌ ಪಕ್ಷಗಳೂ ಸಹ ಚುನಾವಣಾ ಆಯೋಗದ ನೋಂದಾಯಿತ ಪಕ್ಷಗಳ ಪಟ್ಟಿಯಲ್ಲಿ ಅಸ್ತಿತ್ವದಲ್ಲಿವೆ. ಈ ಪಕ್ಷಗಳ ಹೆಸರಿನಡಿ ಸ್ಪರ್ಧಿಸುವ ಸಾಧ್ಯತೆಯೂ ಇದೆ.

2013ರಲ್ಲಿ ಸ್ಪರ್ಧಿಸಿದ್ದ ಪಕ್ಷಗಳು
-ರಾಷ್ಟ್ರೀಯ ಪಕ್ಷಗಳು-6 -ಬಿಜೆಪಿ, ಕಾಂಗ್ರೆಸ್‌, ಬಿಎಸ್ಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ)
-ರಾಜ್ಯದ ಪಕ್ಷಗಳು -1- ಜೆಡಿಎಸ್‌
-ಹೊರ ರಾಜ್ಯದ ಪಕ್ಷಗಳು-6 – ಜೆಡಿಯು, ಎಸ್ಪಿ ಸೇರಿ ಇನ್ನಿತರೆ 4 ಪಕ್ಷಗಳು
-ನೊಂದಾಯಿತ ಪಕ್ಷಗಳು-46 -ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ ಸೇರಿ ಇನ್ನಿತರ 44 ಪಕ್ಷಗಳು

2018ರ ಸಂಭಾವ್ಯ ಪಕ್ಷಗಳು
-ರಾಷ್ಟ್ರೀಯ ಪಕ್ಷಗಳು- 7- ಬಿಜೆಪಿ, ಕಾಂಗ್ರೆಸ್‌, ಬಿಎಸ್ಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ, ಟಿಎಂಸಿ
-ರಾಜ್ಯದ ಪಕ್ಷ – 1- ಜೆಡಿಎಸ್‌
-ಹೊರ ರಾಜ್ಯದ ಪಕ್ಷಗಳು- ಆಮ್‌ ಆದ್ಮಿ ಪಾರ್ಟಿ, ಜೆಡಿಯು, ಎಸ್ಪಿ, ಎಂಇಪಿ, ಶಿವಸೇನೆ, ಎಂಇಎಸ್‌ ಮತ್ತಿತರ.
-ನೊಂದಾಯಿತ ಪಕ್ಷಗಳು- ರಾಜ್ಯದಲ್ಲಿ ನೊಂದಾಯಿತ ಪಕ್ಷಗಳ ಸಂಖ್ಯೆ 47 ಇದ್ದು, ಎಷ್ಟು ಸ್ಪರ್ಧಿಸುತ್ತವೆ ನೋಡಬೇಕಿದೆ

-1952ರ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ಒಟ್ಟು ಪಕ್ಷಗಳ ಸಂಖ್ಯೆ ಕೇವಲ ಆರು
-ಈ ಬಾರಿ ಕಣಕ್ಕಿಳಿಯಲಿರುವ ರಾಷ್ಟ್ರೀಯ ಪಕ್ಷಗಳ ಸಂಖ್ಯೆಯೇ 7
-ಹೊರ ರಾಜ್ಯದ 6 ಪಕ್ಷಗಳು ಕಣಕ್ಕಿಳಿಯುವುದು ಆಗಿದೆ ಪಕ್ಕಾ

ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಪಕ್ಷಕ್ಕೆ ಪೂರಕ ವಾತಾವರಣವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದ ಹಲವು ಯೋಜನೆಗಳಿಂದಾಗಿ ರಾಜ್ಯದ ಜನತೆಯ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಬದಲಾಗಿವೆ. ಈ ಎಲ್ಲ ಅಂಶಗಳೂ ಕಾಂಗ್ರೆಸ್‌ ಪಕ್ಷದ ಪರವಾಗಿವೆ.
-ಡಾ| ಬಿ.ಎಲ್‌.ಶಂಕರ್‌, ಕೆಪಿಸಿಸಿ ಉಪಾಧ್ಯಕ್ಷ.

ವಿಧಾನಸಭೆ ಚುನಾವಣೆ ಟಿಕೆಟ್‌ ಘೋಷಣೆಗೂ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ ನಡುವಿನ ಬಡಿದಾಟ ನೋಡಿದರೆ ಚುನಾವಣೆೆ ಕಾಂಗ್ರೆಸ್‌ ಪಕ್ಷ ಅಸ್ತಿತ್ವದಲ್ಲಿ ಇರುತ್ತದೆಯೇ ಎಂಬ ಅನುಮಾನವಿದೆ.
-ಕೆ.ಎಸ್‌.ಈಶ್ವರಪ್ಪ, ಬಿಜೆಪಿ ಮುಖಂಡ.

* ರಫೀಕ್‌ ಅಹ್ಮದ್‌

-ಉದಯವಾಣಿ

Comments are closed.