ಕರ್ನಾಟಕ

ಬಸವೇಶ್ವರ ನಿಲ್ದಾಣಕ್ಕೆ ಪ್ರಯಾಣಿಕರೇ ಬರುತ್ತಿಲ್ಲ

Pinterest LinkedIn Tumblr

* ಕಾರ್ತಿಕ್‌ ಯು.ಎಚ್‌. ಬೆಂಗಳೂರು


ಮೆಜೆಸ್ಟಿಕ್‌ನಿಂದ ಹೊರಡುತ್ತಿದ್ದ 60 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪೀಣ್ಯ ಸಮೀಪದ ಕೆಎಸ್‌ಆರ್‌ಟಿಸಿ ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಈ ಬಸ್‌ ನಿಲ್ದಾಣ ಪ್ರಯಾಣಿಕರು ಇಲ್ಲದೆ ಬಣಗುಡುತ್ತಿದೆ. ಹೊಸ ನಿಲ್ದಾಣಕ್ಕೆ ಬಸ್‌ಗಳನ್ನು ಸ್ಥಳಾಂತರ ಮಾಡಿರುವ ಮಾಹಿತಿಯೇ ಬಹುಜನರಿಗೆ ತಿಳಿದಿಲ್ಲ. ಹೀಗಾಗಿ ಬೆರಳೆಣಿಕೆಯಷ್ಟು ಮಂದಿ ಬಸ್‌ಗಳಿಗೆ ಹತ್ತುತ್ತಿದ್ದಾರೆ. ಹೀಗಾಗಿ ಇಲ್ಲಿಂದ ಹೊರಡುವ ಬಸ್‌ಗಳು ಖಾಲಿಯಾಗಿಯೇ ಹೋಗುತ್ತಿವೆ.

ಇದು ಹೊಸ ಬಸ್‌ ನಿಲ್ದಾಣಕ್ಕೆ ವಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಂಡು ಬಂದ ದೃಶ್ಯ. ಬಸ್‌ ನಿಲ್ದಾಣದಲ್ಲಿ ಒಂದೆರಡು ಪುಟ್ಟ ಅಂಗಡಿಗಳು ಅಷ್ಟೇ ತೆರೆದಿವೆ. ಜನರು ಬರುತ್ತಿಲ್ಲ. ಮುಂದೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಸಿಬ್ಬಂದಿ ಇದ್ದಾರೆ. ಇಲ್ಲಿ ಕಾಫಿ, ಟೀ ಅಂಗಡಿ ನಡೆಸುತ್ತಿರುವ ಮಾಲೀಕರು ಅದೇ ನಿರೀಕ್ಷೆಯಲ್ಲೇ ಇದ್ದಾರೆ. ಪ್ರಮಾಣಿಕರ ಸಂಖ್ಯೆ ಏರಿಕೆಯಾಗಲು ಕನಿಷ್ಠ 15 ದಿನಗಳಾದರೂ ಬೇಕಾಗಬಹುದು.

ನಿಲ್ದಾಣದಿಂದ ಬಸ್‌ ಹತ್ತುವವರು ಕಡಿಮೆ ಇದ್ದರೂ ಜಾಲಹಳ್ಳಿ ಕ್ರಾಸ್‌, ಪೀಣ್ಯದಾಸರಹಳ್ಳಿ, ಎಂಟನೇ ಮೈಲಿ ಸರ್ಕಲ್‌ಗಳಲ್ಲಿ ಬಸ್‌ ಹತ್ತುವ ಪ್ರಯಾಣಿಕರಿರುವುದರಿಂದ ಹೇಗೋ ಸಮಸ್ಯೆ ನಿವಾರಣೆ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಬಸ್‌ ಚಾಲಕರು ಹಾಗೂ ಕಂಡಕ್ಟರ್‌ಗಳು ಹೇಳಿದರು.

ಮೆಜೆಸ್ಟಿಕ್‌ ನಿಲ್ದಾಣದಿಂದ ಮಂಗಳೂರು, ಧರ್ಮಸ್ಥಳ, ದಾವಣಗೆರೆ, ಹಾಸನ, ಹುಬ್ಬಳ್ಳಿ ಮೊದಲಾದ ಪ್ರದೇಶಗಳಿಗೆ ತೆರಳುತ್ತಿದ್ದ 980 ಸಾಮಾನ್ಯ ಬಸ್‌ಗಳ ಪೈಕಿ, 60 ಬಸ್‌ಗಳನ್ನು ಈ ನಿಲ್ದಾಣದಿಂದ ಹೊರಡಿಸಲಾಗುತ್ತಿದೆ. ಆದರೆ, ನಿಲ್ದಾಣದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಕಂಡುಬರುತ್ತಿಲ್ಲ. ತುಮಕೂರು, ಶಿರಸಿ ಸೇರಿದಂತೆ ಕೆಲ ಪ್ರದೇಶಗಳಿಗೆ ತೆರಳುವ ಬಸ್‌ಗಳು ಹೊರಡುವ ಪ್ಲಾಟ್‌ಫಾರಂನಲ್ಲಿ ದಿನಕ್ಕೆ 30-50 ಮಂದಿ ಪ್ರಯಾಣಿಕರು ಕಂಡುಬರುತ್ತಿದ್ದಾರೆ. ಉಳಿದ ಪ್ಲಾಟ್‌ಫಾರಂಗಳು ಬಹುತೇಕ ಅವಧಿಯಲ್ಲಿ ಖಾಲಿಯಾಗಿವೆ. ಆದರೆ ನಿಲ್ದಾಣದಿಂದ ಬಸ್‌ ಹೊರಟ ಬಳಿಕ ಮಾರ್ಗ ಮಧ್ಯೆ ಜನರು ಹತ್ತಿಕೊಳ್ಳುತ್ತಿರುವುದರಿಂದ ಸಮಸ್ಯೆಯಾಗುತ್ತಿಲ್ಲ. ಮೆಜೆಸ್ಟಿಕ್‌ನಿಂದ ಬಸ್‌ಗಳನ್ನು ಸ್ಥಳಾಂತರಿಸಿರುವ ಬಗ್ಗೆ ಹೆಚ್ಚಿನ ಜನರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ಹೆಚ್ಚು ಪ್ರಚಾರವಾದ ಬಳಿಕ ಇಲ್ಲಿಗೆ ಹೆಚ್ಚು ಜನರು ಬರಲಿದ್ದಾರೆ ಎಂದು ನಿಲ್ದಾಣದ ನಿರ್ವಾಹಕರು ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರದಿಂದ ನಿಲ್ದಾಣ ಮರು ಆರಂಭಗೊಂಡಿದ್ದು, 46 ಬಸ್‌ಗಳನ್ನು ಕಾರ್ಯಾಚರಿಸಲಾಗಿತ್ತು. ಎರಡು ದಿನಗಳ ಬಳಿಕ 60 ಬಸ್‌ಗಳನ್ನು ಕಾರ್ಯಾಚರಿಸಲಾಗುತ್ತಿದೆ. ಪ್ರಯಾಣಿಕರಿಂದ ದೊರೆಯುವ ಸ್ಪಂದನೆ ನೋಡಿಕೊಂಡು ಕ್ರಮೇಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ.

ಬಸ್‌ ನಿಲ್ದಾಣಕ್ಕೆ ಜನರು ಸುಲಭವಾಗಿ ಬರುವಂತೆ ಮಾಡಲು ಎರಡು ಮಿನಿ ಬಸ್‌ಗಳ ಉಚಿತ ಸೇವೆ ಕಲ್ಪಿಸಲಾಗಿದೆ. ಜಾಲಹಳ್ಳಿ ಕ್ರಾಸ್‌ ಮೆಟ್ರೊ ನಿಲ್ದಾಣದಿಂದ ಬಸವೇಶ್ವರ ನಿಲ್ದಾಣಕ್ಕೆ ಪ್ರತಿ ದಿನ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಮಿನಿ ಬಸ್‌ಗಳು ಸಂಚಾರ ನಡೆಸುತ್ತಿವೆ. 15 ನಿಮಿಷಕ್ಕೊಂದು ಬಸ್‌ ಸೇವೆ ದೊರೆಯುತ್ತಿದೆ. ಒಂದು ಬಸ್‌ ದಿನಕ್ಕೆ ಕನಿಷ್ಠ 20 ಬಾರಿ ಸೇವೆ ನೀಡುತ್ತಿದೆ. ಆದರೂ ಈ ಮಿನಿ ಬಸ್‌ಗಳನ್ನು ಹೆಚ್ಚಿನ ಪ್ರಯಾಣಿಕರು ಬಳಸಿಕೊಳ್ಳುತ್ತಿಲ್ಲ. ಜಾಲಹಳ್ಳಿ ಕ್ರಾಸ್‌, ನಾಗಸಂದ್ರ ಮೊದಲಾದ ಭಾಗಗಳ ಜನರು ಬಸ್‌ ನಿಲ್ದಾಣಕ್ಕೆ ಬಾರದೆ ಅದೇ ಸ್ಥಳದಿಂದ ಬಸ್‌ ಹತ್ತಿಕೊಳ್ಳುತ್ತಿದ್ದಾರೆ. ಹೀಗಾಗಿ ಬಸ್‌ ಬೆಂಗಳೂರಿಗೆ ಗಡಿ ದಾಟುವಾಗ ಅರ್ಧದಷ್ಟಾದರೂ ಪ್ರಯಾಣಿಕರು ತುಂಬಿರುತ್ತಾರೆ ಎಂದು ನಿರ್ವಾಹಕರು ಮಾಹಿತಿ ನೀಡಿದ್ದಾರೆ. ನಗರದ ವಿವಿಧ ಭಾಗಗಳಿಂದ ಬರುವ ಜನರು ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ಮೆಜೆಸ್ಟಿಕ್‌ಗೆ ಮಾತ್ರ ಬರುತ್ತಿದ್ದಾರೆ. ಇಂತಹವರನ್ನು ಬಸವೇಶ್ವರ ನಿಲ್ದಾಣಕ್ಕೆ ಬರುವಂತೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಂಚಾರ ದಟ್ಟಣೆಗೆ ಪರಿಹಾರ

ಈ ಕ್ರಮದಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಮೆಜೆಸ್ಟಿಕ್‌ನಿಂದ ಹೊರಟ ಬಸ್‌ಗಳು ಓಕಳಿಪುರ, ಡಾ.ರಾಜ್‌ಕುಮಾರ್‌ ರಸ್ತೆ, ಯಶವಂತಪುರ ಮಾರ್ಗವಾಗಿ ಪೀಣ್ಯಕ್ಕೆ ಬರುತ್ತವೆ. ಸಂಜೆ 6 ರಿಂದ ರಾತ್ರಿ 11 ರವರೆಗೆ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಇದರಿಂದ ಪ್ರಯಾಣಿಕರು ಬೇಗನೆ ತಲುಪುವುದು ಅಸಾಧ್ಯವಾಗುತ್ತದೆ. ಹೆಚ್ಚು ಬಸ್‌ಗಳು ಒಂದೇ ಸಮಯದಲ್ಲಿ ಹೊರಡುವುದರಿಂದ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತದೆ. ಅದರಲ್ಲೂ, ಹಬ್ಬದ ಸಮಯದಲ್ಲಿ ಸಮಸ್ಯೆ ಹೆಚ್ಚುತ್ತದೆ. ಬಸ್‌ಗಳ ಸ್ಥಳಾಂತರ ಮಾಡಿರುವುದರಿಂದ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ. ಬಸವೇಶ್ವರ ನಿಲ್ದಾಣಕ್ಕೆ ಮೆಟ್ರೊ ಮೂಲಕ ಸುಲಭವಾಗಿ ಬರಬಹುದು.

ಕಡಿಮೆ ಗ್ರಾಹಕರು

ಬಸವೇಶ್ವರ ನಿಲ್ದಾಣದಲ್ಲಿ ಒಂದು ಮತ್ತು ಎರಡನೇ ಮಹಡಿಯಲ್ಲಿ ಸುಮಾರು 50 ಮಳಿಗೆಗಳಿದ್ದು, ಎಲ್ಲವನ್ನೂ ಒಬ್ಬರಿಗೆ ಟೆಂಡರ್‌ ಮೂಲಕ ನೀಡಲಾಗಿದೆ. ಇಲ್ಲಿ ಹೋಟೆಲ್‌, ಲಾಡ್ಜ್‌, ವ್ಯಾಯಾಮ ಶಾಲೆ ನಿರ್ಮಿಸಲು ಅವಕಾಶ ನೀಡಲಾಗುತ್ತಿದೆ. ನಿಲ್ದಾಣದಲ್ಲಿ ಎರಡು ಸಣ್ಣ ಮಳಿಗೆಗಳು ಹಾಗೂ ಒಂದು ಹೋಟೆಲ್‌ ಮಾತ್ರ ಸದ್ಯಕ್ಕೆ ಲಭ್ಯವಿದೆ. ಪ್ರಯಾಣಿಕರು ಕಡಿಮೆ ಇರುವುದರಿಂದ ಹೆಚ್ಚಿನ ಲಾಭವಾಗುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿಯ 25 ಸಿಬ್ಬಂದಿ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಲ್ದಾಣದಲ್ಲಿ ಎರಡು ಶೌಚಾಲಯ, ಫಿಲ್ಟರ್‌ ನೀರಿನ ವ್ಯವಸ್ಥೆ ಮಾಡಲಾಗಿದೆ.

ಟಿಕೆಟ್‌ ದರ ಕಡಿಮೆ

ಇದುವರೆಗೆ ಮೆಜೆಸ್ಟಿಕ್‌ನಿಂದ ಹೊರಡುತ್ತಿದ್ದ , ಈಗ ಬಸವೇಶ್ವರ ನಿಲ್ದಾಣದಿಂದ ಹೊರಡುತ್ತಿರುವ ಬಸ್‌ಗಳಲ್ಲಿ ಟಿಕೆಟ್‌ ದರ 10 ರಿಂದ 12 ರೂ. ಕಡಿಮೆಯಾಗಿದೆ. ಮೆಜೆಸ್ಟಿಕ್‌ನಿಂದ ಪೀಣ್ಯವರೆಗೆ ಸಂಚರಿಸುವುದು ತಪ್ಪಿದ್ದು, ಒಟ್ಟು ಪ್ರಯಾಣದಲ್ಲಿ ಸುಮಾರು ಒಂದು ಗಂಟೆ ಕಡಿತವಾಗಲಿದೆ.

ಸ್ಕೈವಾಕ್‌

ಮೆಟ್ರೊದ ಪೀಣ್ಯ ಇಂಡಸ್ಟಿ ನಿಲ್ದಾಣದಿಂದ ಬಸವೇಶ್ವರ ಬಸ್‌ ನಿಲ್ದಾಣಕ್ಕೆ ಜನರು ಸುಲಭವಾಗಿ ನಡೆದುಕೊಂಡು ಹೋಗಲು ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ಸ್ಕೈವಾಕ್‌ ಯೋಜನೆ ರೂಪಿಸಲಾಗಿದೆ. ಬಿಎಂಆರ್‌ಸಿಎಲ್‌ನಿಂದ ಯೋಜನೆ ಅನುಷ್ಠಾನಗೊಳ್ಳಲಿದ್ದು, ವಿನ್ಯಾಸ ರೂಪಿಸಲಾಗುತ್ತಿದೆ. ಸ್ಕೈವಾಕ್‌ನಲ್ಲಿ ವಾಕಲೇಟರ್‌ ಅಳವಡಿಸುವ ಪ್ರಸ್ತಾವವೂ ಇದೆ.

ಪೀಣ್ಯದ ನಿವಾಸಿಯಾಗಿದ್ದು, ತಿಂಗಳಿಗೆ ಒಮ್ಮೆ ಶಿರಸಿಗೆ ಪ್ರಯಾಣಿಸುತ್ತೇನೆ. ಮೊದಲು ಮೆಜೆಸ್ಟಿಕ್‌ಗೆ ಹೋಗಿ ಅಲ್ಲಿಂದ ಬಸ್‌ ಹತ್ತುತ್ತಿದ್ದೆ. ಈಗ ಮನೆಗೆ ಸಮೀಪದಲ್ಲೇ ಬಸ್‌ ಲಭ್ಯವಾಗುತ್ತಿದೆ.
-ವಾಸುದೇವಮೂರ್ತಿ, ಪೀಣ್ಯ

ಕಡಿಮೆ ಪ್ರಯಾಣಿಕರಿರುವುದರಿಂದ ಹೆಚ್ಚು ವ್ಯಾಪಾರವಾಗುತ್ತಿಲ್ಲ. ಮೆಜೆಸ್ಟಿಕ್‌ನಿಂದ ಬರುವ ಬಸ್‌ಗಳಲ್ಲಿ ಹೆಚ್ಚು ಪ್ರಯಾಣಿಕರಿರುತ್ತಾರೆ. ಅಲ್ಲಿಂದ ಬರುವ ಬಸ್‌ಗಳಿಂದ ಇಳಿಯುವ ಪ್ರಯಾಣಿಕರು ತಿಂಡಿ, ನೀರು ಖರೀದಿಸುತ್ತಾರೆ.
-ಸುರೇಶ್‌, ವ್ಯಾಪಾರಿ

ಮಾಹಿತಿ ಒದಗಿಸಲು ಸೂಚನೆ

”ಮೆಜಿಸ್ಟಿಕ್‌ನಿಂದ ಉತ್ತರಕರ್ನಾಟಕ, ದಕ್ಷಿಣ ಕನ್ನಡ ಮತ್ತು ಇತರೆ ಜಿಲ್ಲೆಗಳಿಗೆ ತೆರಳುತ್ತಿದ್ದ 980 ಸಾಮಾನ್ಯ ಬಸ್‌ಗಳ ಪೈಕಿ 60 ಬಸ್‌ಗಳನ್ನು ಪೀಣ್ಯ ನಿಲ್ದಾಣಕ್ಕೆ ಸ್ಥಳಾಂತರಿಸಿ, ಅಲ್ಲಿಂದಲೇ ಕಾರ್ಯಾಚರಿಸಲಾಗುತ್ತಿದೆ. ಉಳಿದ 920 ಬಸ್‌ಗಳು ಸದ್ಯ ಮೆಜೆಸ್ಟಿಕ್‌ನಿಂದ ಪೀಣ್ಯ ನಿಲ್ದಾಣ ಮಾರ್ಗವಾಗಿಯೇ ಸಂಚರಿಸಲಿವೆ. ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ, ಹಂತ ಹಂತವಾಗಿ ಈ ಬಸ್‌ಗಳನ್ನು ಸ್ಥಳಾಂತರಿಸಲಾಗುವುದು. ಬಸ್‌ಗಳ ಸ್ಥಳಾಂತರ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಒದಗಿಸುವಂತೆ ನಿಲ್ದಾಣದ ಸಿಬ್ಬಂದಿಗೆ ಸೂಚಿಸಲಾಗಿದೆ,” ಎಂದು ಕೆಎಸ್‌ಆರ್‌ಟಿಸಿ ಪ್ರಧಾನ ವ್ಯವಸ್ಥಾಪಕ (ಸಂಚಾರ) ವಿಶ್ವನಾಥ್‌ ತಿಳಿಸಿದರು.

”ಐಷಾರಾಮಿ ಮತ್ತು ವೇಗದೂತ ಬಸ್‌ಗಳನ್ನು ಪೀಣ್ಯಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿಲ್ಲ. ಶೀಘ್ರದಲ್ಲೇ ಪೀಣ್ಯ ನಿಲ್ದಾಣದಿಂದ ಬಿಎಂಟಿಸಿ ಬಸ್‌ ಸಂಚಾರವೂ ಆರಂಭವಾಗಲಿದೆ. ಆ ಬಳಿಕ ನಗರದ ನಾನಾ ಪ್ರದೇಶಗಳಿಂದ ಇಲ್ಲಿಗೆ ಬಸ್‌ ಸಂಪರ್ಕ ಲಭಿಸಲಿದೆ. ಪೀಣ್ಯ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯೂ ಕ್ರಮೇಣ ಜಾಸ್ತಿ ಆಗಲಿದೆ,” ಎಂದು ಹೇಳಿದರು.

Comments are closed.